ಗುರುಪುರ: ತುಳುನಾಡಿನಲ್ಲಿ ಸಾವಿರಕ್ಕೂ ಮಿಕ್ಕಿ ಗುತ್ತುಗಳಿದ್ದು, ಇಂದು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ. ಇಂದು ಗುತ್ತುಗಳು ಕೇವಲ ಮದುವೆ ಆಮಂತ್ರಣ ಪತ್ರಿಗಳಿಗಷ್ಟೇ ಸೀಮಿತವಾಗಿದೆ. ನಮಗೆ ಗುತ್ತನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅವುಗಳ ಬಗ್ಗೆ ಪಾರಂಪರಿಕ ಸಂದೇಶ ನೀಡುವ ಕೆಲಸ ನಡೆಯಬೇಕು ಎಂದು ಡಾ| ವೈ.ಎನ್. ಶೆಟ್ಟಿ ಪಡುಬಿದ್ರಿ ಅಭಿಪ್ರಾಯಿಸಿದರು.
ಅವರು ಗೋಳಿದಡಿಗುತ್ತಿನಲ್ಲಿ ಮಹಾಕಾಲೇಶ್ವರ ವೇದಿಕೆಯಲ್ಲಿ ನಡೆಯುತ್ತಿರುವ ಗುತ್ತು ನಿಮಗೆಷ್ಟು ಗೊತ್ತು ವಿಚಾರ ಗೋಷ್ಠಿಯಲ್ಲಿ ಗುತ್ತು-ಹುಟ್ಟು-ಪರಂಪರೆ-ಆಶಯ ವಿಷಯದಲ್ಲಿ ಸಾಮಾಜಿಕ ದೃಷ್ಟಿಕೋನದ ಬಗ್ಗೆ ವಿದ್ವಾಂಸ ಡಾ| ವೈ.ಎನ್. ಶೆಟ್ಟಿ ಪಡುಬಿದ್ರಿ ವಿಚಾರಮಂಡನೆ ನಡೆಸಿದರು.
ಗುತ್ತು ಇದಕ್ಕೆ ಸರಿಯಾದ ಅರ್ಥ ಸಿಗುವುದಿಲ್ಲ. ಸಮಾಜಿಕ ನ್ಯಾಯ ತೀರ್ಮಾನವಾಗುವ ಪ್ರದೇಶವನ್ನು ಗುತ್ತು ಎಂದು ಕರೆಯಲಾಗುತ್ತಿದೆ. ಇತ್ತೀಚೆಗೆ ದೊರೆತ ತೋಕೂರು ಶಾಸನದಲ್ಲಿ ತೋಕೂರಣ್ಣೆರ್ ಎನ್ನುವ ಶಬ್ದ ಸಿಗುತ್ತದೆ. ಆಯಾಯ ಪ್ರದೇಶದ ಸಾಮಾಜಿಕ ಕಟ್ಟುಪಾಡು, ಪರಂಪರೆ, ಅಧಿಕಾರ ಈ ಎಲ್ಲ ಅಂಶಗಳನ್ನೊಳಗೊಂಡು ಗುತ್ತು ಆಯ್ಕೆ ಮಾಡಲಾಗುತ್ತಿತ್ತು. ಗುತ್ತಿನ ಮನೆಯು ಸಾಕಷ್ಟು ವಿಶಿಷ್ಠವಾಗಿದ್ದು, ಇದರಲ್ಲಿ ಮೈಲೆದ ಕೋಣೆ, ಜೈನೆದಿ ಕೋಣೆ, ಕರ್ಪಿಲ್, ಕೂಟಾಯಿ, ಪೊಲಿ ಕೂಟಾಯಿ ಮುಂತಾದ ಕೋಣೆಗಳಿದ್ದವು. ಮೈಲೆದ ಕೋಣೆ ಅಂದರೆ ಋತುಸ್ರಾವದ ಮಹಿಳೆಯರು ವಿಶ್ರಾಂತಿ ಪಡೆದುಕೊಳ್ಳುವ ಜಾಗ ಆಗಿತ್ತು. ಕರ್ಪಿಲ್ ಎಂದರೆ ನ್ಯಾಯ ತೀರ್ಮಾನವಾಗುವವರೆಗೆ ಇರಬೇಕಾದ ಜಾಗವಾಗಿತ್ತು. ಬ್ರಿಟಿಷರು ಈ ವ್ಯವಸ್ಥೆಯನ್ನು ನಾಶ ಮಾಡಲು ನೋಡಿದರೂ ಅವರಿಂದ ಸಾಧ್ಯವಾಗಿರಲಿಲ್ಲ. ಗುತ್ತು ಹಾಗೂ ಪಟ್ಟದ ಮನೆಗೆ ಸಂಬಂಧ ಇತ್ತು ಎಂದರು.

ಗುತ್ತಿನ ಗಡಿ ಹಿಡಿಯುವ ಅಧಿಕಾರ ಗುತ್ತಿನ ಮನೆಯವರಿಗೆ ಇದೆ. ದೈವದ ಹೆಸರಲ್ಲಿ ಗಡಿ ಪಡೆದು ತೀರ್ಮಾನ ಕೊಡಲಾಗುತ್ತಿತ್ತು. ದೈವವು ಅಗೋಚರ ಶಕ್ತಿಯ ರೂಪದಲ್ಲಿ ನ್ಯಾಯ ತೀರ್ಮಾನದಲ್ಲಿ ಮಹತ್ತರ ಪಾತ್ರ ವಹಿಸುತ್ತಿತ್ತು. ಅರಸನಿಗೆ ಜನಿವಾರ ಹಾಗೂ ಮುದ್ರೆ ಉಂಗರು ಹೊರತುಪಡಿಸಿ ಗುತ್ತು ಹಾಗೂ ಅರಸು ಇಬ್ಬರಿಗೂ ಸಾಕಷ್ಟು ಹೊಂದಾಣಿಕೆ ಇತ್ತು. ಗುತ್ತು ಎನ್ನುವುದು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಯಾಕೆಂದರೆ ತುಳುನಾಡಿನಲ್ಲಿ ಆಯಾಯ ಜಾತಿಯವರೂ ಗುತ್ತಿನವರಾಗಿದ್ದರು. ಉದಾಹರಣೆಗೆ ಕಪೆತಿಗುತ್ತು ಬಿಲ್ಲವರದ್ದಾಗಿದ್ದು ನಟ್ಟಿಲ್ ಎನ್ನುತ್ತಿದ್ದರು. ಹೀಗೆ ಬ್ರಾಹ್ಮಣ, ನಾಯಕ, ಕುಡುಬಿ ಜಾತಿಯಲ್ಲೂ ಗಡಿಕಾರರಿದ್ದಾರೆ. ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದವರೂ ಗುತ್ತಿನವರಾಗಿ ಕೆಲಸ ಮಾಡಿದ್ದರು. ಇದರಿಂದಾಗಿ ಸಿಕ್ಕಸಿಕ್ಕವರಿಗೆ ಗಡಿ ಕೊಡಲಾಗುವುದಿಲ್ಲ. ಗಡಿ ಹಿಡಿದವರೇ ಗಡಿ ಪಡೆಯಬೇಕು ಎನ್ನುವ ನಿಯಮವಿತ್ತು ಎಂದು ನುಡಿದರು.
ಧರ್ಮ ರಕ್ಷಣೆ, ಸಮಾನ ನ್ಯಾಯ ನೀಡುವ ಉದ್ದೇಶ: ಕೆ.ಎಲ್ ಕುಂಡಂತ್ತಾಯ
ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ ಬಗ್ಗೆ ವಿದ್ವಾಂಸರಾದ ಕೆ.ಎಲ್ ಕುಂಡಂತ್ತಾಯ ಅವರು ವಿಚಾರ ಮಂಡನೆ ನಡೆಸಿ, ಧರ್ಮ ರಕ್ಷಣೆ, ಸಮಾನ ನ್ಯಾಯ ನೀಡುವ ಉದ್ದೇಶದಿಂದ ಅರಸರ ಆಡಳಿತದಲ್ಲಿ ಆಯಾಯ ಸೀಮೆಯನ್ನೊಳಗೊಂಡು ಆಯಾಯ ಪ್ರದೇಶದಲ್ಲಿ ಗುತ್ತು ಹುಟ್ಟಿಕೊಂಡಿತು. ಆ ಪ್ರದೇಶದ ನ್ಯಾಯ, ನಿಷ್ಠೆ, ಧರ್ಮವನ್ನು ರಕ್ಷಿಸುವುದು ಆ ಗುತ್ತಿನವರ ಕರ್ತವ್ಯ. ಊರಿನ ಜಾತ್ರೆ, ಕೋಲ ಮುಂತಾದ ಅದರ ನೃತೃತ್ವ ವಹಿಸುವುದು ಗುತ್ತಿನವರ ಜವಾಬ್ದಾರಿ. ಊರಿನಲ್ಲಿ ಅನುಕರಣೀಯ ವ್ಯಕ್ತಿಯಾಗಿ ಬದುಕುತ್ತಿದ್ದ. ಧಾರ್ಮಿಕ ನೆಲೆಗಡ್ಡಿನಲ್ಲಿ ನ್ಯಾಯದಾನ ನೀಡುವುದು ಆತನ ಕರ್ತವ್ಯ ಎಂದರು.
ವಿಚಾರಗೋಷ್ಠಿಯಲ್ಲಿ ಪ್ರಶ್ನೋತ್ತರ ನಡೆಸಲಾಯಿತು. ಇದಕ್ಕೆ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್ ನಿತ್ಯಾನಂದ ಅವರು ಸೂಕ್ತ ಉತ್ತರ ನೀಡಿದರು. ಇದಕ್ಕೆ ಪೂರಕವಾಗಿ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರೂ ಉತ್ತರಿಸಿದರು.
