ಬಂಟ್ವಾಳ:ಇಲ್ಲಿನ ಪುರಸಭೆ ವ್ಯಾಪ್ತಿಯ ಬಂಟ್ವಾಳ ಪೇಟೆಯಲ್ಲಿ ಕಳೆದ 15 ವರ್ಷಗಳ ಹಿಂದೆ ನಿರ್ಮಾಣಗೊಂಡ ‘ವಾಸುದೇವ ಟವರ್ಸ್’ ಬಹುಮಹಡಿ ಕಟ್ಟಡ ನಿರ್ಮಾಣ ವೇಳೆ ಕೆಲವೊಂದು ನಿಯಮಾವಳಿ ಉಲ್ಲಂಘನೆ ಮತ್ತು ಸೆಟ್‍ಬ್ಯಾಕ್ ಬಿಟ್ಟಿಲ್ಲ ಎಂಬ ಕಾರಣಕ್ಕಾಗಿ ಹೈಕೋರ್ಟಿನ ಸೂಚನೆಯಂತೆ ಕಟ್ಟಡದ ಪಶ್ಚಿಮ ಭಾಗ ಕೆಡಹುವ ಕಾರ್ಯ ಶುಕ್ರವಾರ ಆರಂಭಗೊಂಡಿದೆ.

18btl-Gode-2
ಇಲ್ಲಿನ ಸ್ವರ್ಣೋದ್ಯಮಿ ಬಿ.ನಾಗೇಂದ್ರ ಬಾಳಿಗಾ ಎಂಬವರು ಬಂಟ್ವಾಳ ಪೇಟೆ ಸರ್ವೆ ನಂಬ್ರ 131-4ಬಿ ಸ್ವಂತ ಜಮೀನಿನಲ್ಲಿ ನೆಲ ಅಂತಸ್ತು ಮತ್ತು ಮೂರು ಮಹಡಿ ನಿರ್ಮಿಸಲು ಕಳೆದ 1998ರಲ್ಲಿ ಪುರಸಭೆಯಿಂದ ಪರವಾನಿಗೆ ಪಡೆದುಕೊಂಡಿದ್ದರು. ಆ ಬಳಿಕ ವಾಣಿಜ್ಯ ಮತ್ತು ವಸತಿ ಸಂಕೀರ್ಣ ಹೊಂದಿರುವ ಬಹುಮಹಡಿ ಕಟ್ಟಡ ನಿರ್ಮಿಸಿಸಿದ್ದರು. ಇದೇ ವೇಳೆ ಇವರು ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ, ಸೆಟ್ ಬ್ಯಾಕ್ ಬಿಡದೆ ತನ್ನ ಮನೆಗೆ ತಾಗಿಕೊಂಡಂತೆ ಕಟ್ಟ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಭಾಮಿ ವಿಠಲದಾಸ ಶೆಣೈ ಎಂಬವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಬಗ್ಗೆ ನೆಲ ಮತ್ತು ಮೂರು ಅಂತಸ್ತಿನ ಕಟ್ಟಡದ ಪಶ್ಚಿಮ ಭಾಗದ ಕಟ್ಟಡ ತೆರವುಗೊಳಿಸದಿರುವ ಬಗ್ಗೆ ಕಳೆದ 2014ರಲ್ಲಿ ಅಂದಿನ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರಿಗೆ ನ್ಯಾಯಾಂಗ ನಿಂದನೆ ಆರೋಪ ಎದುರಾಗಿತ್ತು.

ಇದೀಗ ಮತ್ತೆ ನ್ಯಾಯಾಲಯದ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಯೋಜನಾ ನಿರ್ದೇಶಕ ವಿ.ಪ್ರಸನ್ನ ಮತ್ತಿತರರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ, ಕಟ್ಟಡ ತೆರವುಗೊಳಿಸಲು ಸೂಚಿಸಿದ್ದರು.

18btl-Bhami
ಮಂಗಳೂರು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರು ಕೂಡಾ ಆಗಮಿಸಿ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದೀಗ ತೆರವುಗೊಳಿಸುವ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಅಂಗಡಿ ಮಾಲೀಕರು ಬಾಡಿಗೆದಾರರು ಕೂಡಲೇ ಕೊಠಡಿ ತೆರವುಗೊಳಿಸುವಂತೆ ನೋಟೀಸು ನೀಡಲಾಗಿದೆ.
ಪುರಸಭೆ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಕಂದಾಯ ಅಧಿಕಾರಿ ಶಿವ ನಾಯ್ಕ್, ಕಂದಾಯ ನಿರೀಕ್ಷಕ ಪುರುಷೋತ್ತಮ ಶೆಟ್ಟಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಎಎಸ್ಪಿ ಸೈದುಲ್ ಅದಾವತ್ ನಿರ್ದೇಶನದಂತೆ ನಗರ ಠಾಣೆ ಪೊಲೀಸರ ಉಪಸ್ಥಿತಿಯಲ್ಲಿ ಕಟ್ಟಡದ ಪಶ್ಚಿಮ ಭಾಗದಲ್ಲಿ ಸುಮಾರು 4ರಿಂದ 7ಮೀಟರಿನಷ್ಟು ಭಾಗ ಒಡೆದು ಆಂಶಿಕ ತೆರವುಗೊಳಿಸುವ ಕಾರ್ಯ ಶುಕ್ರವಾರ ಭರದಿಂದ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ಇತಿಹಾಸ ಸೃಷ್ಟಿ:
ಇದೊಂದು ಬಂಟ್ವಾಳ ಪುರಸಭೆಯ ಇತಿಹಾಸದಲ್ಲಿ ಪ್ರಥಮ ಕಾರ್ಯಾಚರಣೆಯಾಗಿದ್ದು, ಇತರ ಕಟ್ಟಡ ಮಾಲೀಕರಿಗೆ ಕೂಡಾ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ ಎಂದು ಪುರಸಭೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *