ಬಂಟ್ವಾಳ:ಇಲ್ಲಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅನಧಿಕೃತ ಮೀನು ಮಾರುಕಟ್ಟೆಯನ್ನು ರೈಲ್ವೆ ಪೊಲೀಸರು ಗುರುವಾರ ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದಾಗ ಮೀನು ಮಾರಾಟಗಾರರು ಮತ್ತು ಸ್ಥಳೀಯರು ಮತ್ತೆ ತಡೆ ಒಡ್ಡಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಇದೇ ವೇಳೆ ಹೆದ್ದಾರಿ ಬದಿ ರೈಲ್ವೇ ಕಾರ್ಮಿಕರು ಬೇಲಿ ಹಾಕಲು ಮುಂದಾಗುತ್ತಿದ್ದಂತೆಯೇ ಸ್ಥಳೀಯರೊಂದಿಗೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಬಂಟ್ವಾಳ ಗ್ರಾಮಾಂತರ ಠಾಣೆ ಎಸೈ ಪ್ರಸನ್ನ ಎಂ.ನೇತೃತ್ವದ ಪೊಲೀಸರು ಬಂದು ರೈಲ್ವೇ ಇಲಾಖೆ ಉನ್ನತ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಸ್ಪರ ಮಾತುಕತೆ ನಡೆಸುವ ತನಕ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.ರೈಲ್ವೆ ಇಲಾಖೆ ಸಹಾಯಕ ವಿಭಾಗೀಯ ಎಂಜಿನಿಯರ್ ಕೃತ್ಯಾನಂದ ಆಗಮಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಹೆದ್ದಾರಿ ಬದಿ ಹೆಚ್ಚುವ ವಿಸ್ತಾರವಾಗಿ ಖಾಲಿ ಜಾಗ ಬಿಡಬೇಕು ಎಂದು ಪಂಚಾಯಿತಿ ಲಿಖಿತ ಬೇಡಿಕೆ ಸಲ್ಲಿಸುವಂತೆ ಸಲಹೆ ನೀಡಿದರು.
ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಎಎಸ್ಪಿ ಸೈದುಲು ಅಡಾವತ್ ಸ್ಥಳಕ್ಕೆ ಭೇಟಿ ನೀಡಿ ರೈಲ್ವೆ ಇಲಾಖೆ ಅಧಿಕಾರಿಗಳೊಮದಿಗೆ ಮಾತುಕತೆ ನಡೆಸಿದರು. ರೈಲ್ವೆ ಇಲಾಖೆಗೆ ಸೇರಿದ ಜಮೀನು ಮಾತ್ರ ಒತ್ತುವರಿ ಮಾಡುವ ಮೂಲಕ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ರಸ್ತೆಯಿಂದ 13 ಅಡಿ ಖಾಲಿ ಜಾಗ ಬಿಡುವಂತೆ ಸಲಹೆ ನೀಡಿದರು. ಇನ್ಸ್‍ಪೆಕ್ಟರ್ ಟಿ.ಡಿ.ನಾಗರಾಜ್, ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಉಪಾಧ್ಯಕ್ಷ ಹಾರೀಶ್ ಪೆರಿಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಇಕ್ಬಾಲ್ ಮತ್ತಿತರರು ಇದ್ದರು.
