ಕುಪ್ಪೆಪದವು: ಕರಪತ್ರ ಹಿಡಿದು ಮತಪ್ರಚಾರ ನಡೆಸುತ್ತಿದ್ದಾನೆಂಬ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕುಪ್ಪೆಪದವು ಸಮೀಪದ ಬಾರ್ದಿಲ ಎಂಬಲ್ಲಿ ಶುಕ್ರವಾರ ನಡೆದಿದೆ.
ವ್ಯಕ್ತಿ ತನ್ನನ್ನು ಪಾಂಡುಗೌಡ ಎಂದು ಪರಿಚಯಿಸಿಕೊಂಡಿದ್ದು, ತಾನು ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದ್ದು, ತಾವೂ ಕೂಡಾ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡುತ್ತಿದ್ದ ಎಂದು ಮನೆಯವರು ಆರೋಪಿಸಿದ್ದಾರೆ. ಈ ಬಗ್ಗೆ ಸಂಶಯಗೊಂಡ ಮನೆಯವರು ಬಜಪೆ ಠಾಣೆಗೆ ಮಾಹಿತಿ ನೀಡಿದ್ದು, ಬಜಪೆ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿಯವರ ತಂಡ ಆಗಮಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಈತನಲ್ಲಿದ್ದ ಕರಪತ್ರಗಳನ್ನು ವಶಕ್ಕೆ ಪಡೆದು ಸೂಕ್ತ ಎಚ್ಚರಿಕೆ ನೀಡಿ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
