ಮೂಡುಬಿದಿರೆ: ಕ್ರಿಸ್ಮಸ್ ಹಬ್ಬದ ಆಚರಣೆ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದ್ದು, ಎಲ್ಲರಿಗೂ ಶಾಂತಿ ನೆಮ್ಮದಿ ತರಲಿ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಮಹಾಗುರುಗಳಾದ ವಂ| ಫಾ| ಮ್ಯಾಕ್ಸಿಮ್ ಎಲ್. ನೊರೋನ್ಹಾ ಹೇಳಿದರು.
ಮೂಡುಬಿದಿರೆಯ ಕೋಪರ್ಸ್ ಕ್ರಿಸ್ತಿ ಚರ್ಚ್ ಸಭಾಂಗಣದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಮೂಡುಬಿದಿರೆ ವಲಯ ಸಮಿತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆದ ಕ್ರಿಸ್ಮಸ್ ಬಂಧುತ್ವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಧರ್ಮಗಳಲ್ಲಿನ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳು ಬೇರೆ ಬೇರೆ ಆಗಿದ್ದು, ಅದರ ಉದ್ದೇಶ ಒಂದೇ ಆಗಿರುತ್ತದೆ. ಪರಸ್ಪರ ಒಬ್ಬರನ್ನೋಬ್ಬರು ಅರ್ಥಮಾಡಿಕೊಂಡು ಬದುಕುವುದು ಇಂದಿನ ಅಗತ್ಯವಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಮೌಲಾನಾ ಯು. ಕೆ. ಅಬ್ದುಲ್ ಅಝೀಜ್ ದಾರಿಮಿ ಮಾತನಾಡಿ, ಹೊಕ್ಕಳ ಬಳ್ಳಿಯೇ ಬಂಧುತ್ವದ ಮೂಲವಾಗಿದ್ದು ಬಂಧುತ್ವವಿರುವಲ್ಲಿ ಮಾತ್ರ ಬಹುತ್ವವನ್ನು ನಿರೀಕ್ಷಿಸಬಹುದಾಗಿದೆ. ಏಸುಕ್ರಿಸ್ತ ಶಾಂತಿಗಾಗಿ ಹುಟ್ಟಿದ ಬೆಳಕು ಎಂಬುದನ್ನು ಅರಿತುಕೊಂಡು ಪರಸ್ಪರ ಪ್ರೀತಿವಿಶ್ವಾಸ ಬೆಳೆಸಿಕೊಂಡು ನೆಮ್ಮದಿಯಿಂದ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ, ಎಸ್.ಎನ್.ಎಂ. ಪಾಲಿಟೆಕ್ನಿಕ್ನ ಉಪನ್ಯಾಸಕಿ ತರೀನ ಪಿಂಟೋ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಮೂಡುಬಿದಿರೆ ವಲಯದ ಅಧ್ಯಕ್ಷ ಹೆರಿ ರೇಗೋ ಸ್ವಾಗತಿಸಿದರು. ಸಂಚಾಲಕ ವಲೇರಿಯನ್ ಸಿಕ್ವೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆರಾಲ್ಡ್ ತಾವ್ರೋ ಪ್ರಾರ್ಥಿಸಿದರು. ಸಿ.ಪ್ರೆಫಿಲ್ಡಾ ತಾಕೊಡೆ ಬೈಬಲ್ ವಾಚಿಸಿದರು. ಆ್ಯಂಡ್ರ್ಯೂ ಡಿ’ಸೋಜಾ ಪಾಲಡ್ಕ ನಿರೂಪಿಸಿ, ವಿಲ್ಸನ್ ಡಿ’ಸೋಜಾ ವಂದಿಸಿದರು.
