ಮೂಡುಬಿದಿರೆ: ಹುದ್ದೆ ಮುಖ್ಯವಲ್ಲ ಬದಲಾಗಿ ಆತ ಮಾಡುವ ಪ್ರಮಾಣಿಕತೆಯ ಕೆಲಸ ಮತ್ತು ವ್ಯಕ್ತಿತ್ವ ಮುಖ್ಯ. ಅದು ಚೌಟರಲ್ಲಿದೆ. ವೃತ್ತಿಯಲ್ಲಿ ಶಿಸ್ತು, ಕಾನೂನಿನ ಚೌಕಟ್ಟಿನೊಳಗೆ ಮಾನವೀಯವಾಗಿ ಸ್ಪಂದಿಸಿ, ಯಾವುದೇ ವಿಳಂಬ ಮಾಡದೆ ಬಡಜನರ ಕೆಲಸಗಳನ್ನು ಮಾಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದವರು. ಅವರ ಕಾರ್ಯತತ್ವರತೆಯಿಂದಾಗಿ ಗ್ರಾಮವು ಸಮಗ್ರವಾಗಿ ಬೆಳವಣಿಗೆ ಕಂಡಿದ್ದು ಮುಂದಿನ ದಿನಗಳಲ್ಲಿ ತಹಸೀಲ್ದಾರರಾಗಿ ಪದೋನ್ನತಿ ಹೊಂದಲಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ತೆಂಕಮಿಜಾರು ಗ್ರಾಮ ಪಂಚಾಯತ್‍ನಲ್ಲಿ ಕಳೆದ ಎಂಟು ವರ್ಷಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬಜ್ಪೆ ಪಂಚಾಯತ್‍ಗೆ ವರ್ಗಾವಣೆಗೊಂಡಿರುವ ಸಾಯೀಶ್ ಚೌಟ ಅವರನ್ನು ತೆಂಕಮಿಜಾರು ಗ್ರಾಮಪಂಚಾಯತ್ ಹಾಗೂ ಊರ ನಾಗರಿಕರ ಪರವಾಗಿ ಶನಿವಾರ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಾಯೀಶ್ ಚೌಟ ಅವರು ಭ್ರಷ್ಟಾಚಾರ ರಹಿತ, ಪಾರದರ್ಶಕವಾದ ಆಡಳಿತವನ್ನು ನಡೆಸಿದ್ದು ಜಿ.ಪಂ. ನಲ್ಲೂ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ಸಾಯೀಶ್ ಚೌಟ ಮಾತನಾಡಿ, ಜೀವನದಲ್ಲಿ ಶಿಸ್ತು ಮತ್ತು ನನ್ನದೇ ಆದ ಕೆಲವು ಸಿದ್ಧಾಂತಗಳನ್ನು ರೂಢಿಸಿಕೊಂಡು ಬಂದಿದ್ದು, ಇದರಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಹುದ್ದೆಯ ಇತಿಮಿತಿಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡಿರುವ ಆತ್ಮ ತೃಪ್ತಿಯಿದೆ. ತನ್ನ ಸೇವಾವಧಿಯಲ್ಲಿ ಸೇವೆ ಸಲ್ಲಿಸಲು ಸಹಕಾರ ನೀಡಿದ ಜನಪ್ರತಿನಿಧಿಗಳು, ಸ್ಥಳೀಯ ಜನರ ಸಹಕಾರವನ್ನು ಸ್ಮರಿಸಿದರು.
ತಾ.ಪಂ. ಮಾಜಿ ಸದಸ್ಯ ಎಂ. ಜಿ. ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ತೆಂಕ ಮಿಜಾರು ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪಂಚಾಯತ್ ಕಾರ್ಯದರ್ಶಿ ಮಂಜಪ್ಪ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್, ಲಯನ್ಸ್ ಕ್ಲಬ್ ತೋಡಾರು – ಮಿಜಾರು ಸ್ಥಾಪಕಾಧ್ಯಕ್ಷ ರಮೇಶ್ ಶೆಟ್ಟಿ ಮರಿಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಮೇಶ್ ಶೆಟ್ಟಿ ಸ್ವಾಗತಿಸಿದರು. ರಾಕೇಶ್ ಭಟ್ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು. ಸುಧಾಕರ ಪೂಂಜಾ ವಂದಿಸಿದರು.
