ಕೈಕಂಬ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಸೌಹಾರ್ದ ನಗರದಲ್ಲಿ ಶನಿವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್(ಎನ್‍ಆರ್‍ಎಲ್‍ಎಂ) ಯೋಜನೆಯಡಿ `ಬೆಳಕು’ ಟೈಲರಿಂಗ್ ಘಟಕ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ರಘು, ಇದು ಎನ್‍ಆರ್‍ಎಲ್‍ಎಂ ಯೋಜನೆಯ ಪ್ರಥಮ ಘಟಕಯಾಗಿದೆ. ಮಹಿಳೆಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢವಾಗಬೇಕಾದರೆ ಇಂತಹ ಯೋಜನೆಗಳಕಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಇದಕ್ಕೆ ಮಾರುಕಟ್ಟೆಯ ವ್ಯವಸ್ಥೆಗೆ ಇಲಾಖಾ ಮಟ್ಟದಲ್ಲಿ ಸಹಕರಿಸಲಾಗುವುದು. ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ ಕ ಜಿಲ್ಲೆಯ ಮಹಿಳೆಯರು ಹೆಚ್ಚು ವಿಚಾರಶೀಲರಾಗಿದ್ದು, ಮಹಿಳೆ ಹಿಂಜರಿಕೆ ಬಿಟ್ಟು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ದಕ ಜಿಪಂ, ಕಂದಾವರ ಗ್ರಾಪಂ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಟೈಲರಿಂಗ್ ಘಟಕ ಉದ್ಘಾಟಿಸಿ ಮಾತನಾಡಿದ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ, ಕಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಇಂತಹ ಇನ್ನೆರಡು ಘಟಕಗಳ ಸ್ಥಾಪನೆಯಾಗಬೇಕು. ಸ್ವ-ಉದ್ಯೋಗ ಮತ್ತು ಮಾರುಕಟ್ಟೆ ಮಟ್ಟದಲ್ಲಿ ಮಹಿಳೆಯರು ಸಬಲರಾಗಬೇಕು. ಮಹಿಳಾ ಸಬಲೀಕರಣಕ್ಕಿರುವ ಸರ್ಕಾರದ ಇತರಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರ ಸಹಭಾಗಿತ್ವದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲಿದೆ. ಮಹಿಳೆಯರು ಒಗ್ಗೂಡಿ, ಉತ್ಸಾಹದಿಂದ ಕೆಲಸ ಮಾಡಬೇಕು. ಈ ಟೈಲರಿಂಗ್ ಘಟಕದಲ್ಲಿ ಸ್ವಯಂ ಸಬಲೀಕರಣಕ್ಕೆ ತಾವೇ ಶ್ರಮಿಸಬೇಕು. ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಹೇಳಿದರು. ಯೋಜನೆಯ ತಾಲೂಕು ಸಂಯೋಜಕಿ ದಯಾವತಿ ಮಾತನಾಡುತ್ತ, ಎನ್‍ಆರ್‍ಎಲ್‍ಎಂ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಎಂ ಕೆ ಅಶ್ರಫ್, ಸುಮತಿ, ಬೆಳಕು ಘಟಕಾಧ್ಯಕ್ಷೆ ಶಶಿಕಲಾ, ತಾಂಪ ಸದಸ್ಯೆ ಉಷಾ ಇದ್ದರು. ಕಂದಾವರ ಗ್ರಾಪಂ ಅಭಿವೃದ್ಧಿ ಅಧಿಕಾರಿ(ಪಿಡಿಒ) ರೋಹಿಣಿ ಸ್ವಾಗತಿಸಿದರು. ಎನ್‍ಆರ್‍ಎಲ್‍ಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್ ಗೌಡ ವಂದಿಸಿದರು.
