ಬಂಟ್ವಾಳ:ಮಕ್ಕಳ ಕವಿ ಪಂಜೆ ಮಂಗೇಶರಾಯರ ಹುಟ್ಟೂರು ಬಂಟ್ವಾಳದಲ್ಲಿ ನಿರ್ಮಾಣಗೊಳ್ಳುತ್ತಿರುವ ರೂ 5ಕೋಟಿ ವೆಚ್ಚದ ‘ಪಂಜೆ ಮಂಗೇಶರಾಯರ ಭವನ’ಕ್ಕೆ ರೂ 3 ಕೋಟಿ ಹೆಚ್ಚುವರಿ ಅನುದಾನ ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಕನ್ನಡದ ಕಲ್ಲಣ ದಿವಂಗತ ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಿ.ಸಿ.ರೋಡಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಿಮರ್ಶಕ ವಿ.ಗ.ನಾಯಕ ಇವರಿಗೆ ನೀರ್ಪಾ ಜೆ ‘ಕನ್ನಡದ ಕಲ್ಲಣ’ ಪ್ರಶಸ್ತಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ಸಾಹಿತಿಗಳ ಯುವಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾಲೇಜು ಮಟ್ಟದಿಂದಲೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಪ್ರಯತ್ನ ನಡೆಯಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ವಿ.ಗ.ನಾಯಕ ಮಾತನಾಡಿ, ತಾನು ಹೊರ ಜಿಲ್ಲೆಯವನಾಗಿದ್ದರೂ ಈ ಜಿಲ್ಲೆಯವನಾಗಿ ಬೆಳೆಯಲು ಅಡ್ಯನಡ್ಕದ ಡಾ.ವಾರಣಾಶಿ ಸುಬ್ರಾಯ ಭಟ್ಟರು, ಸಾಯಿಕೃಷ್ಣ ಭಟ್ಟರು ಮತ್ತು ನೀರ್ಪಾಜೆ ಭೀಮ ಭಟ್ಟರ ಒಡನಾಡ ಕಾರಣ ಎಂದರು. 19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ, ಬೇ.ಸಿ.ಗೋಪಾಲಕೃಷ್ಣ, ಕೈಯೂರು ನಾರಾಯಣ ಭಟ್, ಮತ್ತಿತರರು ಶುಭ ಹಾರೈಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್, ಕೊಳಕೆ ಗಂಗಾಧರ ಭಟ್, ನೀರ್ಪಾಜೆ ಶಂಕರಿ ಬಿ.ಭಟ್ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಬಿ.ತಮ್ಮಯ್ಯ ಸ್ವಾಗತಿಸಿ, ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ವಂದಿಸಿದರು. ಉಪನ್ಯಾಸಕರಾದ ಡಿ.ಬಿ.ಅಬ್ದುಲ್ ರಹಿಮಾನ್ ಮತ್ತು ವಿ.ಸು.ಭಟ್ ಕಾರ್ಯಕ್ರಮ ನಿರೂಪಿಸಿದರು.ಇದೇ ವೇಳೆ ಡಾ.ಪ್ರಮೀಳ ಕೊಳಕೆ ಮತ್ತು ಪಂಚಮಿ ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
