ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ(ನರೇಗಾ) 2018-19ರ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಜರುಗಿತು.
ಮಂಗಳೂರು ತಾಲೂಕಿನ ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜಕಿ ಧನಲಕ್ಷ್ಮೀ ಮಾತನಾಡುತ್ತ, 2005ರಲ್ಲಿ ಕೇಂದ್ರ ಸರ್ಕಾರ ನರೇಗಾ ಆರಂಭಿಸಿದ್ದು, ಇದು ಕಾರ್ಮಿಕರ ಹಕ್ಕು ಆಗಿದೆ. ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿಯೊಂದಿಗೆ ದಿನಗೂಲಿ ಮೂಲಕ ಬಡವರ ಬದುಕಿಗೆ ಆಶಾಕಿರಣವಾಗಿದೆ. ಕೆಲಸ ಕೇಳಿಕೊಂಡು ಬರುವವರಿಗೆ ದಿನಗೂಲಿ ನೀಡುವ ಈ ಯೋಜನೆಯಲ್ಲಿ ನಿಮ್ಮ ಹಣ ಸರ್ಕಾರದಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯ ಗುತ್ತಿಗೆ ಅಥವಾ ಕಮಿಶನ್‍ಗೆ ಅವಕಾಶವಿಲ್ಲ ಎಂದರು.
ಗುರುಪುರ ಹೋಬಳಿಯಲ್ಲಿ ನರೇಗಾ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಸದುಪಯೋಗವಾಗಿದೆ ಮತ್ತು ಅತೀ ಹೆಚ್ಚು ಕಾಮಗಾರಿ ನಡೆದಿದೆ. ಯೋಜನೆಯ ನಾಲ್ಕು ಪ್ರವರ್ಗಗಳಲ್ಲೂ ಕಾಮಗಾರಿ ನಡೆದಿರುವುದು ವಿಶೇಷ ಎಂದು ಸಭೆಯ ನೋಡೆಲ್ ಅಧಿಕಾರಿ ಗುರುಪುರ ಹೋಬಳಿ ಕೃಷಿ ಅಧಿಕಾರಿ ವಿ ಎಸ್ ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸದಸ್ಯ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಮಾತನಾಡುತ್ತ, ಇದು ಕೇಂದ್ರ ಆರಂಭಿಸಿದ ಯೋಜನೆಯಾಗಿದ್ದು, ರಾಜ್ಯ ಸರ್ಕಾರದ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಯೋಜನೆಯಲ್ಲಿ ಕೃಷಿಕರು, ಮನೆ ಕಟ್ಟುವವರಿಗೆ ಸರ್ಕಾರದ ಅನುದಾನ ಸಿಗುತ್ತದೆ. ಯೋಜನೆ ಸದುಪಯೋಗಪಡಿಸಿಕೊಳ್ಳಲು ಅನೇಕ ಅವಕಾಶಗಳಿವೆ ಮತ್ತು ಇದು ಬಡಜನರ ಕಲ್ಯಾಣದ ಯೋಜನೆಯಾಗಿದೆ ಎಂದರು.
ನರೇಗಾ ಯೋಜನೆಯ ಎಲ್ಲ ಕಾಮಗಾರಿಗಳಿಗೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಗ್ರಾಮ ಪಂಚಾಯತಿನಲ್ಲಿ ಯೋಜನೆಗಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ನಿಮ್ಮ ಕೆಲಸಕ್ಕೆ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಗುರುಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ತಿಳಿಸಿದರು.
ಪಂಚಾಯತ್ ಸಿಬ್ಬಂದಿ ಸುದರ್ಶನ್ ಹಿಂದಿನ ಸಾಲಿನ ನರೇಗಾ ಫಲಾನುಭವಿಗಳ ಮಾಹಿತಿ ಹಾಗೂ ಲೆಕ್ಕಪತ್ರ ವಾಚಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾಗಿ ರೇಖಾಮಣಿ, ಸಂಧ್ಯಾಲಕ್ಷ್ಮೀ ಮತ್ತು ಸ್ವಾತಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್ ಇದ್ದರು. ಪಿಡಿಒ ಅಬೂಬಕ್ಕರ್ ವಂದಿಸಿದರು.
