ಬಂಟ್ವಾಳ :ಸಾಮಾಜಿಕ ಬದುಕಿನಲ್ಲಿ ತನ್ನ ದುಡಿಮೆ ಜೊತೆಗೆ ಧಾರ್ಮಿಕತೆ ಮತ್ತು ಸಮಾಜಮುಖಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯೊಬ್ಬರು ಅಗಲಿದ ಬಳಿಕವೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ, ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಹೇಳಿದ್ದಾರೆ. ಇಲ್ಲಿನ ರಾಯಿ ಶ್ರೀ ವಿವೇಕಾನಂದ ಫ್ರೆಂಡ್ಸ್ ಕ್ಲಬ್ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಮಾಜಿ ವಲಯಾಧ್ಯಕ್ಷ ದಿವಂಗತ ದೇವಪ್ಪ ಶೆಟ್ಟಿ ಮಾವಂತೂರು ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪುರೋಹಿತ ರಾಜಾರಾಮ ಭಟ್ ಮಾವಂತೂರು ಮತ್ತು ಉದ್ಯಮಿ ಸಂಜೀವ ಶೆಟ್ಟಿ ಬೋಳಂತೂರುಗುತ್ತು ಇವರು ದಿವಂಗತ ದೇವಪ್ಪ ಶೆಟ್ಟಿ ಅವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ನೆನಪಿಸಿಕೊಂಡರು.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಶ್ರೀ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಚಂದ್ರಶೇಖರ ಗೌಡ ಕಾರಂಬಡೆ, ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟಿನ ಅಧ್ಯಕ್ಷ ಎಂ. ದುರ್ಗಾದಾಸ್ ಶೆಟ್ಟಿ ಮಾವಂತೂರು, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಆಚಾರ್ಯ ಮತ್ತಿತರರು ಶುಭ ಹಾರೈಸಿದರು.
ಕ್ಲಬ್ಬಿನ ಸಂಸ್ಥಾಪಕ ಹರೀಶ ಆಚಾರ್ಯ, ಸಂಚಾಲಕ ಸಂತೋಷ್ ಕುಮಾರ್ ಬೆಟ್ಟು, ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಕೆ.ಪರಮೇಶ್ವರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತಿತರ ಗಣ್ಯರು ಭೇಟಿ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯ ಡೊಂಬಯ ಬಿ. ಅರಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದಿನೇಶ್ ಸುವರ್ಣ ರಾಯಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಶಿಕ್ಷಕ ಹರಿಪ್ರಸಾದ್ ರಾವ್ ಸಂಯೋಜನೆಯಲ್ಲಿ ಸ್ಥಳೀಯ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಸುದರ್ಶನ ವಿಜಯ’ ಮತ್ತು ‘ಅಗ್ರಪೂಜೆ’ ಯಕ್ಷಗಾನ ಪ್ರದರ್ಶನಗೊಂಡಿತು.
