ಗುರುಪುರ : ಗುರುಪುರ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಸೋಮವಾರ ಹೈಸ್ಕೂಲಿನ ಒಟ್ಟು 25 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಸೈಕಲ್ ವಿತರಿಸಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ವಿದ್ಯಾರ್ಥಿಗಳು ಸರ್ಕಾರದ ಸೈಕಲ್ ಭಾಗ್ಯ ಯೋಜನೆಯ ಸದುಪಯೋಗ ಪಡೆದು, ಭವಿಷ್ಯದಲ್ಲಿ ಉತ್ತಮನಾಗರಿಕರಾಗಬೇಕು. ಯಡಿಯೂರಪ್ಪರು ಆರಂಭಿಸಿದ ಈ ಯೋಜನೆ ಸಿದ್ದರಾಮಯ್ಯ ಮತ್ತು ಪ್ರಸಕ್ತ ಸರ್ಕಾರವೂ ಮುಂದುವರಿಸಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ಹಾಗೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶ ಈ ಯೋಜನೆಯಲ್ಲಡಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ ಕಾವ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯರಾದ ಸೇಷಮ್ಮ, ರಾಜೇಶ್ ಸುವರ್ಣ ಹಾಗೂ ಲಕ್ಷ್ಮಣ ಶೆಟ್ಟಿ, ಸುಬ್ಬಯ್ಯ ಭಂಡಾರಿ ಉಪಸ್ಥಿತರಿದ್ದರು.
ಇದೇ ವೇಳೆ ಸರ್ಕಾರ ಪ್ರಸಕ್ತ ಶಿಕ್ಷಣ ವರ್ಷದಲ್ಲಿ(2018-19) ಒಂದರಿಂದ 10ನೇ ತರಗತಿಯವರಿಗೆ ಮಂಜೂರು ಮಾಡಿರುವ `ಶಾಲಾ ದಿನಚರಿ’ ಪುಸ್ತಕವನ್ನು ಇಲ್ಲಿನ ಹೈಸ್ಕೂಲು ವಿದ್ಯಾರ್ಥಿಗಳಿಗೆ ಹಂಚಲಾಯಿತು. ಶಾಲಾ ಮುಖ್ಯ ಶಿಕ್ಷಕಿ ರೂಪಾ ಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಂಧ್ಯಾ ವಂದನಾರ್ಪಣೆಗೈದರು.
ಚಿತ್ರ30ವಿಪಿಸೈಕಲ್

