ಮೂಡುಬಿದಿರೆ: ನವೆಂಬರ್ 24 ರಿಂದ 28ರವರೆಗೆ ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ 79ನೇ ಅಖಿಲ ಭಾರತ ಅಂತರ್ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ಶಿಪ್ನ್ನು ಆಯೋಜಿಸಲಾಗಿದೆ. ಕ್ರೀಡಾಕೂಟವು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿರುವ ಅಖಿಲ ಭಾರತ ಅಂತರ್ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ಶಿಪ್ ಇದಾಗಿದ್ದು, ದೇಶದ 350 ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಸುಮಾರು 4500 ಅಥ್ಲೀಟ್ಗಳು ಹಾಗೂ 2000 ಕ್ರೀಡಾಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭ
ಕ್ರೀಡಾಕೂಟದ ಸ್ಪರ್ಧೆಗಳು ನವೆಂಬರ್ 24ರಂದು ಬೆಳಗ್ಗೆ 6.30ರಿಂದಲೇ ಆರಂಭವಾಗಲಿದ್ದು, ಅಂದು ಸಂಜೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. 3.30ಕ್ಕೆ ಮೂಡುಬಿದಿರೆಯ ಹನುಮಾನ್ ದೇವಸ್ಥಾನದಿಂದ ಭವ್ಯ ಮೆರವಣಿಗೆ ಹೊರಡಲಿದೆ. ನಮ್ಮ ರಾಷ್ಟ್ರದ ವಿವಿಧ ಕಲೆ-ಸಂಸ್ಕøತಿಗಳನ್ನು ಬಿಂಬಿಸುವ 79 ಕಲಾತಂಡಗಳು ಈ ಮೆರವಣಿಗೆಯಲ್ಲಿಇರಲಿವೆ. ಮೂಲ್ಕಿ-ಮೂಡುಬಿದಿರೆ ವಿಧಾನಸಭಾಕ್ಷೇತ್ರದ ಶಾಸಕರಾಗಿರುವ ಉಮಾನಾಥ್ಕೋಟ್ಯಾನ್ ಈ ಭವ್ಯ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಪಥಸಂಚಲನದ ನಂತರ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ.ಈಶ್ವರ ಪಿ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಡಿ. ಹರ್ಷೇಂದ್ರಕುಮಾರ್, ಶ್ರೀಕ್ಷೇತ್ರ ಧರ್ಮಸ್ಥಳ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಮಂಗಳೂರು ಲೋಕಸಭಾಕ್ಷೇತ್ರದ ಸಂಸದ ನಳಿನ್ಕುಮಾರ್ ಕಟೀಲ್ ಕ್ರೀಡಾಜ್ಯೊತಿಯನ್ನು ಸ್ವೀಕರಿಸಲಿದ್ದಾರೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಡಾ.ವಿನಯ್ ಹೆಗ್ಡೆ ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಒಲಂಪಿಯನ್ ಪಿ.ಟಿ.ಉಷಾ ಭಾಗವಹಿಸಲಿದ್ದು, ಅವರನ್ನು ಉದ್ಘಾಟನಾ ಸಮಾರಂಭದಲ್ಲಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಉಡುಪಿ, ಮಂಗಳೂರು ಹಾಗೂ ಕೊಡಗು ಕ್ಷೇತ್ರಗಳ ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ.
ಸಮಾರೋಪ ಸಮಾರಂಭ
ಕ್ರೀಡಾಕೂಟದ ಸಮಾರೋಪ ಸಮಾರಂಭವು ನವೆಂಬರ್ 28ರಂದು 3 ಗಂಟೆಗೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದ್ದು, ಕರ್ನಾಟಕ ಘನಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಿದ್ದಾರೆ. ಸಮಾರೋಪ ಸಮಾರಂದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಲಯದ ಕುಲಪತಿಗಳಾಗಿರುವ ಡಾ.ಈಶ್ವರ್ ಪಿ.ವಹಿಸಿಕೊಳ್ಳಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರಜೈನ್ ಹಾಗೂ ಅಮರ್ನಾಥ್ ಶೆಟ್ಟಿ, ಮೂಡುಬಿದಿರೆ ಪಟ್ಟಣ ಪುರಸಭೆಯ ಅಧ್ಯಕ್ಷರಾಗಿರುವ ಹರಿಣಾಕ್ಷಿ ಸುವರ್ಣ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
79ನೇ ಅಖಿಲ ಭಾರತಅಂತರ್ವಿಶ್ವವಿದ್ಯಾಲಯಅಥ್ಲೆಟಿಕ್ ಚಾಂಪಿಯನ್ಶಿಪ್ನ ವಿಶೇಷತೆಗಳು:
• ರಾಷ್ಟ್ರದ 350ರಿಂದ 400 ವಿಶ್ವವಿದ್ಯಾಲಯಗಳ 4500ಕ್ಕೂ ಹೆಚ್ಚು ಅಥ್ಲೀಟ್ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಸುಮಾರು 2000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದು, ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.
• ನಾಲ್ಕುದಿನ ಹಗಲು ಮತ್ತುರಾತ್ರಿ ಕ್ರೀಡಾಕೂಟದ ಸ್ಪರ್ಧೆಗಳು ನಡೆಯಲಿವೆ.
• ವಿಶೇಷವಾಗಿ ಹೊನಲು ಬೆಳಕು ಹಾಗೂ ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ.
• ಪ್ರತಿದಿನ ರಾತ್ರಿ 8 ಗಂಟೆಗೆ ಪದಕ ವಿಜೇತರಿಗೆ ಸನ್ಮಾನ ನಡೆಯಲಿದೆ. ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
• ಕ್ರೀಡಾಕೂಟದ ಪದಕ ವಿಜೇತರಿಗೆ ಹಾಗೂ ಕೂಟದಾಖಲೆ ನಿರ್ಮಿಸಿದ ಆಟಗಾರರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಗದು ಪುರಸ್ಕಾರವನ್ನು ನೀಡಲಾಗುವುದು.
ಉಚಿತ ಊಟ ಹಾಗೂ ವಸತಿ ಸೌಲಭ್ಯ
ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲಾ ಸ್ಪರ್ಧಿಗಳು, ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದರ ಜೊತೆಗೆ ಕ್ರೀಡಾಕೂಟಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಂಸ್ಥೆ ನೀಡುತ್ತಿದೆ.
ವಿಶೇಷ ಸನ್ಮಾನ
ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಳ್ವಾಸ್ ಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು. ರಿಯೋಒಲಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಎಂ.ಆರ್.ಪೂವಮ್ಮ, ಜಕಾರ್ತದಲ್ಲಿ ನಡೆದ ಕಾಮನ್ವೆಲ್ತ್-2018 ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿಜೇತರಾದ ಧಾರುಣ್ ಅಯ್ಯಸಾಮಿ ಹಾಗೂ ಯೂಥ್ ಒಲಂಪಿಕ್ಸ್ನ ಪದಕ ವಿಜೇತ ಪ್ರವೀಣ್ ಈ ವಿಶೇಷ ಸನ್ಮಾನವನ್ನು ಸ್ವೀಕರಿಸಲಿದ್ದಾರೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ತಿಳಿಸಿದ್ದಾರೆ

