ಮೂಡುಬಿದಿರೆ: ಹತ್ತು ವರ್ಷಗಳ ಹಿಂದೆಯೇ ಮೂಡುಬಿದಿರೆ ತಾಲೂಕಿಗೆ ಬೇಕಾದ ಹೆಚ್ಚಿನ ಎಲ್ಲಾ ಇಲಾಖೆಗಳನ್ನು ನಾನು ಶಾಸಕನಾಗಿದ್ದಾಗಲೆ ಮಂಜೂರು ಮಾಡಿಸಿದ್ದೆ. ತಾಲೂಕು ರಚನೆಗೆ ನಡೆಸಿದ ಹೋರಾಟ ಫಲವಾಗಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೂಡುಬಿದಿರೆ ತಾಲೂಕು ಘೋಷಣೆ ಮಾಡಿ ಅನುದಾನವನ್ನು ಕೂಡ ಬಜೆಟ್ನಲ್ಲಿ ಇರಿಸಿದ್ದರು. ತಾಲೂಕು ರಚನೆಯಲ್ಲಿ ಮಾಜಿ ಶಾಸಕ ಎಸ್.ಡಿ ಸಾಮ್ರಾಜ್ಯ, ಅಮರನಾಥ ಶೆಟ್ಟಿ ಅವರ ಕೊಡುಗೆಯು ಇದೆ. ನ.25ರಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಮೂಡುಬಿದಿರೆ ತಾಲೂಕನ್ನು ಉದ್ಘಾಟಿಸಲಿದ್ದು ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಭಾಗವಹಿಸುವೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಶಿರ್ತಾಡಿಯ ಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಬುಧವಾರ ನಡೆದ ಮಂಗಳೂರು ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಕುಮಾರ್ ಜೈನ್ ಅವರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ದ.ಕ, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಕಾರ್ಯಕರ್ತರು ಸಂಘಟಿತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಿರ್ತಾಡಿ ಸಂಪತ್ ಸಾಮ್ರಾಜ್ಯ ಅಭಿನಂದನಾ ಭಾಷಣ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಸನಿಲ್, ಎಪಿಎಂಸಿ ಸದಸ್ಯರಾದ ಪೌಸ್ತಿನ್ ಸಿಕ್ವೇರಾ, ಶೀನ, ತಾಲ್ಲೂಕು ಪಂಚಾಯತಿ ಸದಸ್ಯರಾದ ಪ್ರಶಾಂತ್ ಅಮೀನ್, ರೀಟಾ ಕುಟಿನ್ಹಾ, ವಾಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ, ನೆಲ್ಲಿಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಪಿ.ಕೆ ರಾಜುಪೂಜಾರಿ, ಪುರಸಭಾ ಸದಸ್ಯರಾದ ಸುಪ್ರಿಯಾ ಡಿ. ಶೆಟ್ಟಿ, ಡಾ.ಆಶೀರ್ವದ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರುಕ್ಕಯ ಪೂಜಾರಿ ಸ್ವಾಗತಿಸಿದರು. ಶಿವಾನಂದ ಪಾಂಡ್ರು ನಿರೂಪಿಸಿದರು.
