ಕೈಕಂಬ: ಪುರಾತನ ಮಾತೆ ಶ್ರೀಮಾತೆ ಅಂಬಾಭವಾನಿ ದೇವಿ ದೇವಸ್ಥಾನ ಬ್ರಿಂಡೇಲ್‍ಪದವು, ತೆಂಕಎಡಪದವು ಇದರ ಜೀರ್ಣೋದ್ಧಾರ ಕುರಿತ ಸಮಸ್ತ ಊರ ಹಾಗೂ ಪರವೂರ ಭಕ್ತರ ಸಭೆಯು ಭಾನುವಾರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಈ ವೇಳೆ ಭಕ್ತರ ಸಮ್ಮುಖದಲ್ಲಿ ಹಲವು ಸಲಹೆ ಸೂಚನೆಗಳನ್ನು ಪಡೆಯಲಾಯಿತು.ತಾಪಂ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು ಅವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ, ಮಾಜಿ ಶಾಸಕ ಕೃಷ್ಣ ಜೆ. ಪಾಲೆಮಾರ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಭೂತನಾಥೇಶ್ವರ ದೇವಸ್ಥಾನದ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಇವರನ್ನು ಗೌರವ ಅಧ್ಯಕ್ಷರನ್ನುಗಳಾಗಿ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದ್ದು, ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಯಲಿದೆ.
ಜೀರ್ಣೋದ್ಧಾರ ನಡೆಯುವ ಮುನ್ನ ತಾಂಬೂಲ ಪ್ರಶ್ನೆ ನಡೆಸಲಾಗಿದ್ದು, ಅದರ ಪ್ರಕಾರ ಧಾರ್ಮಿಕ ವಿವಿಧಾನಗಳನ್ನು ನಡೆಸಲು ನಿರ್ಧರಿಸಲಾಗಿದೆ. ದೇವಸ್ಥಾನಕ್ಕೆ ಬೇಕಾದ ಜಾಗವನ್ನು ದೇವಸ್ಥಾನದ ಹೆಸರಿಗೆ ಮಾಡಲು ನಿರ್ಧರಿಸಲಾಗಿದೆ. ಸರಕಾರದಿಂದ ಸಿಗಬೇಕಾದ ನೆರವು ಪಡೆಯಲು ಭಕ್ತರೆಲ್ಲಾ ಒಗ್ಗಟ್ಟಾಗಿ ಸೇರಿ ಸರಕಾರದ ಗಮನ ಸೆಳೆಯಲು ಭಕ್ತರು ನಿರ್ಧರಿಸಿದರು. ದಾನಿಗಳಿಂದ ಸಿಗಬೇಕಾದ ನೆರವನ್ನು ಪಡೆಯಲು ಎಲ್ಲರೂ ಗರಿಷ್ಠ ಪ್ರಯತ್ನ ಮಾಡುವಂತೆ ನಿರ್ಧರಿಸಲಾಯಿತು.
ನಿಗದಿತ ಸಮಯದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯವು ನಿರ್ವಿಘ್ನವಾಗಿ ನಡೆಯುವಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಧಾರ್ಮಿಕ ವಿವಿಧಾನದಂತೆ ಕೆಲಸ ಮಾಡಿ, ತಾಂಬೂಲ ಪ್ರಶ್ನೆಯ ಪ್ರಕಾರ ದೇವಸ್ಥಾನ ಶೀಘ್ರವಾಗಿ ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶೋತ್ಸವ ನಡೆಸಬೇಕು. ದೇವಸ್ಥಾನದಲ್ಲಿರುವ ಪರಿವಾರ ದೈವಗಳ ಗುಡಿಗಳ ಜೀರ್ಣೋದ್ಧಾರಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುನ್ನ ಪ್ರಶ್ನೆಯಲ್ಲಿ ಕಂಡುಬಂದಂತೆ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಎಲ್ಲರು ಒಟ್ಟಾಗಿ ಸೇರಿ ಪೂರ್ಣಗೊಳಿಸುವಂತೆ ನಿರ್ಧರಿಸಲಾಯಿತು. ಈ ವೇಳೆ ಭಕ್ತರು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಜೀಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ರುಕ್ಮಯ ನಾಯ್ಕ, ಕಾರ್ಯದರ್ಶಿ ಕೃಷ್ಣಪ್ಪ ನಾಯ್ಕ್ ಮತ್ತು ಗ್ರಾಪಂ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
