ನೀರುಮಾರ್ಗ: ರಾಷ್ಟ್ರೀಯ ಫಾರ್ಮಸಿ ಸಪ್ತಾಹ(2018) ಅಂಗವಾಗಿ ನೀರುಮಾರ್ಗದ ಜಿ ಆರ್ ಎಜ್ಯುಕೇಶನ್ ಟ್ರಸ್ಟಿನ ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ಶುಕ್ರವಾರ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಹಿನ್ನೆಲೆಯಲ್ಲಿ ಆಯೋಜಿಸಲಾದ `ಆರೋಗ್ಯ ಭಾರತಕ್ಕೆ ಫಾರ್ಮಸಿಗಳು’ ಕಾರ್ಯಕ್ರಮವನ್ನು ಕಂಕನಾಡಿ ಫಾ. ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ರೆ. ಫಾ. ರಿಚರ್ಡ್ ಎಲೋಶಿಯಸ್ ಕೊಯೆಲ್ಲೋ ದೀಪ ಬೆಳಗಿಸಿ ಉದ್ಘಾಟಿಸಿದರು.
ಇದು ಉತ್ತಮ ಪರಿಸರ ಒಳಗೊಂಡ ಫಾರ್ಮಸಿ ಶಿಕ್ಷಣ ಸಂಸ್ಥೆಯಾಗಿದ್ದು, ಇಲ್ಲಿ ಕಲಿಕೆಗೆ ಅವಕಾಶ ಸಿಕ್ಕಿರುವುದು ನಿಮ್ಮ ಸೌಭಾಗ್ಯ. ಜೀವನ ಶೈಲಿ ಉತ್ತಮ ಗೊಳಿಸುವುದರೊಂದಿಗೆ ಆಹಾರ ಪದ್ಧತಿ ಮತ್ತು ವ್ಯಾಯಾಮದತ್ತ ಗಮನಹರಿಸಬೇಕು. ಆಧುನಿಕ ಜಗತ್ತಿನಲ್ಲಿ ಯುವಕರಲ್ಲಿ ಹೃದಯಾಘಾತ ಹೆಚ್ಚಾಗಿದ್ದು, ಎಚ್ಚರವಹಿಸಬೇಕು. ಫಾರ್ಮಸಿ ಶಿಕ್ಷಣದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯಬೇಕು ಎಂದು ಫಾ. ಕೊಯೆಲ್ಲೋ ತಿಳಿಸಿದರು.
ಜಿ. ಆರ್ ಎಜ್ಯುಕೇಶನ್ ಟ್ರಸ್ಟಿನ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಗಣೇಶ್ ರಾವ್ ಅಧ್ಯಕ್ಷೀಯ ಭಾಷಣ ಮಾಡುತ್ತ, ಇಲ್ಲಿ ಶಿಸ್ತಿನ ಶಿಕ್ಷಣ ಪರಿಸರವೊಂದಿದೆ. ಇಲ್ಲಿ ಪ್ರತಿಯೊಬ್ಬರೂ ಸಮಾನರಾಗಿದ್ದು, ಸಹಿಷ್ಣುತೆಗೆ ಮಹತ್ವ ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿವೆ. ಸಂಶೋಧನೆಗಳು ಮುಂದುವರಿಯಬೇಕು ಮತ್ತು ಒಂದು ವಿಷಯದಲ್ಲಿ ತೃಪ್ತಿ ಕಂಡುಕೊಳ್ಳುವ ಮನೋ ವಿಶಾಲತೆ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಬಾಬು, ಉಪ-ಪ್ರಾಂಶುಪಾಲ ರವಿ ಕುಮಾರ್, ಕರಾವಳಿ ಕಾಲೇಜಿನ ನಿರ್ದೇಶಕಿ ಲತಾ ಜಿ ರಾವ್ ಇದ್ದರು. ಟ್ರೆಸ್ಸಾ ಕಾರ್ಯಕ್ರಮ ನಿರೂಪಿಸಿದರೆ, ಅಪೂರ್ವ ಸ್ವಾಗತಿಸಿದರು. ಮಿಸ್ರಿಯಾ ವಂದಿಸಿದರು.
