ಕುಡುಪು : ಕರಾವಳಿ ಕರ್ನಾಟಕದ ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟು ಯಕ್ಷಗಾನ ಪ್ರಕಾರಗಳು ನಮಗೆ ಮಾನನೀಯವಾಗಿದೆ. ಕಲೆಯ ಎಲ್ಲ ಪ್ರಕಾರವಮ್ಮೂ ಗೌರವಿಸಬೇಕೆಂದು ಪೇಜಾವರ ಸ್ವಾಮಿ ಹೇಳಿದರು.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆಯುತ್ತಿರುವ ಕದ್ರಿಯ ಶ್ರೀಕೃಷ್ಣ ಯಕ್ಷಸಭಾದ `ಯಕ್ಷ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಯಕ್ಷ ಕಲಾವಿದರಾದ ಬಜ್ಪೆ ರಾಘವದಾಸ ಮತ್ತು ಬಡಗಿನ ನರಸಿಂಹ ಗಾಂವ್ಕರ್‍ಗೆ ಶಾಲು ಹೊದಿಸಿ ಸನ್ಮಾನಿಸಿದರು.
ಕರ್ನಾಟಕ ಬ್ಯಾಂಕಿನ ಅಧಿಕಾರಿ ಜಯರಾಮ ಭಟ್ ಮಾತನಾಡುತ್ತ, ಶ್ರೀಕೃಷ್ಣ ಯಕ್ಷಸಭಾವು ಈ ಬಾರಿ ಕುಡುಪು ಪರಿಸರದ ಯಕ್ಷ ಪ್ರೇಕ್ಷಕರಿಗೆ ಯಕ್ಷ ರಸದೌತಣ ನೀಡುತ್ತಿದೆ. ನಮ್ಮ ಬ್ಯಾಂಕ್ ಯಕ್ಷಗಾನ ಕಲೆಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದೆ. ಇದೊಂದು ಸಂವೃದ್ಧ ಕಲೆಯಾಗಿದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ದೀಪಕ್ ಶೆಟ್ಟಿ, ವಕ್ಪಾಡಿ ಶೇಖರ ಶೆಟ್ಟಿ, ಶಾಲಿನಿ ಆಚಾರ್ಯ, ಚಂದ್ರಹಾಸ ಶೆಟ್ಟಿ ಪೆರ್ಮಂಕಿ, ಉಮೇಶ್ ಶೆಟ್ಟಿ ಮೂಡುಶೆಡ್ಡೆ, ಚಂದ್ರಶೇಖರ ಭಂಡಾರಿ, ಪ್ರಭಾಕರ ಭಟ್, ಕುಡುಪು ನರಸಿಂಹ ತಂತ್ರಿ, ಯಕ್ಷಸಭಾದ ಸನತ್ ಕುಮಾರ್ ಜೈನ್, ರವಿ ಅಲೆವೂರಾಯ ಮೊದಲಾದವರಿದ್ದರು. ಯಕ್ಷಸಭಾದ ಪದಾಧಿಕಾರಿ ಸುಧಾಕರ ರಾವ್ ಪೇಜಾವರ ಪ್ರಸ್ತಾವಿಕ ಮಾತನಾಡಿದರು. ಕಲಾವಿದ ಸನ್ಮಾನ ಪತ್ರ ವಾಚಿಸಿದ ಕುಡುಪು ವಾಸುದೇವ ರಾವ್ ವಂದಿಸಿದರು.
ಸಭೆಗೆ ಮುಂಚೆ ಶುಭಾ ಶೇಷಾದ್ರಿ ಭಟ್ ಬಳಗದಿಂದ ಭಜನೆ ನಡೆಯಿತು. ಬಳಿಕ ಬಡಾಬಡಗು ತಿಟ್ಟುವಿನ ಕಲಾವಿದರಿಂದ `ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.
