ಮೂಡುಬಿದಿರೆ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಲ್ಲಿನ ಪೌರಕಾರ್ಮಿಕರು ಸೋಮವಾರದಿಂದ ಪುರಸಭೆ ಆವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ್ದಾರೆ.
ಜುಲೈ 2016ರಿಂದ ಎಪ್ರಿಲ್ 2018ರವರೆಗೆ ಪೌರಕಾರ್ಮಿಕರಿಂದ ಪಿ.ಎಫ್ ಮತ್ತು ಇಎಸ್‍ಐ ಹಣವನ್ನು ಗುತ್ತಿಗೆದಾರ ಹೆಚ್ಚುವರಿಯಾಗಿ ಪಡೆಕೊಂಡಿದ್ದು ಈ ಹಣವನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿಸದೆ ಅನ್ಯಾಯವೆಸಗಲಾಗಿದೆ ಎಂದು ಕಾರ್ಮಿಕರು ಪ್ರತಿಭಟನೆಯಲ್ಲಿ ಆರೋಪಿಸಿದ್ದಾರೆ.

`ನಮ್ಮ ವೇತನದಲ್ಲಿ ಹೆಚ್ಚುವರಿಯಾಗಿ ಪಡಕೊಂಡ ಹಣವನ್ನು ಹಿಂತಿರುಗಿಸುವಂತೆ ಗುತ್ತಿಗೆದಾರರಲ್ಲಿ, ಮುಖ್ಯಾಧಿಕಾರಿಯವರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪೌರಕಾರ್ಮಿಕರು ಮತ್ತು ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರು ಸೋಮವಾರದಿಂದ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದೇವೆ’ ಎಂದು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸುನಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರ ಮಂಗಳೂರಿನ ಪ್ರಸಾದ್ ಎಂಬವರು ಪೌರಕಾರ್ಮಿಕರಿಗೆ ರೂ 4 ಲಕ್ಷ ಹಣ ಪಾವತಿಗೆ ಬಾಕಿ ಇದೆ ಎಂದು ಕಾರ್ಮಿಕರು ಆರೋಪಿಸಿದರೆ ನನಗೆ ಪುರಸಭೆಯಿಂದ ಸುಮಾರು 20 ಲಕ್ಷ ಪಾವತಿಗೆ ಬಾಕಿ ಇದೆ ಎಂದು ಗುತ್ತಿಗೆದಾರ ಮಾಹಿತಿ ನೀಡಿದ್ದಾರೆ. ಪುರಸಭೆ ಬಾಕಿ ಹಣವನ್ನು ನೀಡಿದರೆ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣವನ್ನು ನಾನು ತಕ್ಷಣ ನೀಡುವುದಾಗಿಯೂ ಗುತ್ತಿಗೆದಾರ ತಿಳಿಸಿದರು.
ಪುರಸಭೆ ಪರಿಸರ ಇಂಜಿನಿಯರ್ ಶಿಲ್ಪಾ ಕುರಿತು ಪ್ರತಿಕ್ರಿಯಿಸಿ, `ಕಳೆದ ಮಾರ್ಚ್‍ನಿಂದ ಪೌರಕಾರ್ಮಿಕರಿಗೆ ಪುರಸಭೆಯೆ ನೇರವಾಗಿ ವೇತನ ನೀಡುತ್ತಿದೆ. ಅದಕ್ಕಿಂತ ಮೊದಲು ಗುತ್ತಿಗೆದಾರ ಕಾರ್ಮಿಕರಿಂದ ಹೆಚ್ಚುವರಿಯಾಗಿ ಪಡಕೊಂಡ ಪಿಎಫ್ ಮತ್ತು ಇಎಸ್‍ಐ ಹಣದ ವಿಚಾರದ ಬಗ್ಗೆ ಚರ್ಚಿಸಿ ಪರಿಹರಿಸುವ ಬಗ್ಗೆ ನ.3ಕ್ಕೆ ಪೌರಕಾರ್ಮಿಕರ ಸಭೆ ಕರೆಯಲಾಗಿದೆ. ಆದರೆ ಕಾರ್ಮಿಕರು ಅದಕ್ಕು ಮೊದಲೆ ಪ್ರತಿಭಟನೆಗಿಳಿದಿದ್ದಾರೆ ಎಂದು ಹೇಳಿದರು.
