ಕುಪ್ಪೆಪದವು: ಕುಪ್ಪೆಪದವು ಪೇಟೆಯಲ್ಲಿ ರಿಕ್ಷಾಗಳನ್ನು ಅಡ್ಡಾದಿಡ್ಡಿ ನಿಲ್ಲಿಸಬಾರದು ಎಂದು ಗ್ರಾಮ ಪಂಚಾಯತ್ ರಿಕ್ಷಾಚಾಲಕರಿಗೆ ಸೂಚನೆ ಬಗ್ಗೆ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ವಸಂತ ಆಚಾರಿಯವರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ರಿಕ್ಷಾ ಚಾಲಕ ಮಾಲಕರ ಸಭೆಯಲ್ಲಿ ಈ ರೀತಿ ಆಕ್ರೋಶ ವ್ಯಕ್ತವಾಗಿದೆ.
ಕೇವಲ ರಿಕ್ಷಾ ಚಾಲಕರ ಮೇಲೆ ಮಾತ್ರ ಕೆಂಗಣ್ಣು ಬೀರುತ್ತಿರುವ ಪಂಚಾಯತ್ ಆಡಳಿತದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಕೆಲವು ರಿಕ್ಷಾ ಚಾಲಕರು ಪಾರ್ಕ್ ಬಿಟ್ಟು ಇತರ ಸ್ಥಳಗಳಲ್ಲಿ ನಿಲ್ಲಿಸಿ ಬಾಡಿಗೆ ಮಾಡುವುದು ನಿಜ. ಆದರೆ ಕೇವಲ ಇದರಿಂದ ಮಾತ್ರ ಟ್ರಾಫಿಕ್‍ಗೆ ಸಮಸ್ಯೆಯಾಗುತ್ತಿಲ್ಲ. ಖಾಸಗಿ ವಾಹನಗಳೇ ಹೆಚ್ಚಾಗಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಾರೆ. ಆದರೆ ಅವುಗಳ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ ಎಂದು ದೂರಿದರು. ನಾವು ಶೋಕಿಗಾಗಿ ರಿಕ್ಷಾ ಓಡಿಸುತ್ತಿಲ್ಲ.

ಹೊಟ್ಟೆಪಾಡಿಗಾಗಿ ನಿಯತ್ತಿನಿಂದ ದುಡಿಯುವ ರಿಕ್ಷಾಚಾಲಕರಿಗೆ ಸಮ್ಮ ಸಂಘದ ಸದಸ್ಯತ್ವ ಹೊಂದಿರದ ಮತ್ತು ಸರಿಯಾದ ದಾಖಲೆಗಳಿಲ್ಲದೇ ರಿಕ್ಷಾ ಪಾರ್ಕ್ ಬಿಟ್ಟು ಎಲ್ಲೆಂದರಲ್ಲಿ ಬಾಡಿಗೆ ಮಾಡುವ ಕೆಲವು ರಿಕ್ಷಾಗಳಿಂದಾಗಿ ಕೆಟ್ಟ ಹೆಸರು ಬರುವಂತಾಗಿದೆ ಎಂದು ರಿಕ್ಷಾ ಚಾಲಕರು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತಾಡಿದ ಅಧ್ಯಕ್ಷರು, ರಿಕ್ಷಾ ಚಾಲಕರು ಸಮಾಜಕ್ಕೆ ಸೇವೆಯನ್ನು ಒದಗಿಸುವವರು. ನಿಯತ್ತಿನಿಂದ ದುಡಿಯುವ ರಿಕ್ಷಾ ಚಾಲಕರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಸರಿಯಾದ ದಾಖಲೆಗಳಿಲ್ಲದ ರಿಕ್ಷಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಂಚಾಯತ್, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಇದಿನಬ್ಬ ಪೂವಣಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *