ಮೂಡುಬಿದಿರೆ: ಆಧುನಿಕ ಯಂತ್ರೋಪಕರಣ, ಹೊಸ ತಂತ್ರಜ್ಞಾನವನ್ನು ಬಳಸಿ ತನ್ನ ಕೃಷಿಯಲ್ಲಿ ಅಳವಡಿಸಿ ಯಶಸ್ವಿಯಾಗುತ್ತಿರುವ ಯುವ ಕೃಷಿಕ ಪುತ್ತಿಗೆ ನೆಲ್ಲಿಗುಡ್ಡೆಯ ಜನಾರ್ದನ ಗೌಡ, `ಕೇವಲ ಸಾವಿರ ವೆಚ್ಚದಲ್ಲಿ ಕೋಳಿ ಮೊಟ್ಟೆಗೆ ಕೃತಕ ಕಾವು’ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇವರಿಗೆ ಸ್ವಂತ ಕೃಷಿ ಭೂಮಿ ಇಲ್ಲದಿದ್ದರೂ 11 ಎಕರೆ ಜಾಗವನ್ನು ಲೀಸ್‍ಗೆ ಪಡೆದುಕೊಂಡು ಲಾಭದಾಯಿಕ ಕೃಷಿ ಮಾಡುತ್ತಿದ್ದು, ಹಿರಿಯ ಕೃಷಿಕರ ಮಾರ್ಗದರ್ಶನ ಸಾಮಾಜಿಕ ಜಾಲತಾಣ, ಯುಟ್ಯೂಬ್‍ನಲ್ಲಿ ಬರುವ ಕೃಷಿಗೆ ಸಂಬಂಧಿಸಿದ ಟೆಕ್ನಿಕ್‍ಗಳನ್ನು ಅಳವಡಿಸಿಕೊಂಡಿದ್ದಾರೆ. ಯಂತ್ರದ ಮೂಲಕ ಭತ್ತದ ಕೃಷಿ, ತೆಂಗಿನ ಮರ ಹತ್ತಲು ಕ್ಲೈಂಬರ್‍ನಂತಹ ವ್ಯವಸ್ಥೆಯನ್ನು ಜನಾರ್ದನ ಗೌಡ ಈಗಾಗಲೇ ಅಳವಡಿಸಿಕೊಂಡಿದ್ದಾರೆ.

2ಅಡಿ ಉದ್ದ, ಅಗಲ, ಮತ್ತು ಎತ್ತರದ ಥರ್ಮೋಕೋಲ್ ಪೆಟ್ಟಿಗೆಯನ್ನು ನಿರ್ಮಿಸಿ ಅದರ ಮೇಲ್ಭಾಗದಲ್ಲಿ ವಿದ್ಯುತ್ ಬಲ್ಬ್ ಇರಿಸಿದ್ದಾರೆ. ಈ ಪೆಟ್ಟಿಗೆಯೊಳಗೆ ಒಂದು ಸೆನ್ಸರ್, ಹೊರಗಡೆ ಉಷ್ಣತೆಯ ಮಾಪಕವೊಂದನ್ನು ಅಳವಡಿಸಿದ್ದಾರೆ. ಈ ಪೆಟ್ಟಿಗೆಯಲ್ಲಿ ಸುಮಾರು 50 ಮೊಟ್ಟೆಗಳನ್ನಿರಿಸಲು ಅವಕಾಶವಿದೆ. ಉಷ್ಣತೆಯ ಪ್ರಮಾಣ 37.5 ಡಿ.ಸೆ. ಇರುವಂತೆ ರೂಪಿಸಲಾಗಿದೆ.ಪೆಟ್ಟಿಗೆಯೊಳಗೆ ಕಾಲು ಲೀ. ನೀರನ್ನು ಇರಿಸಲಾಗಿದೆ.
ಇದರ ಹೊರತಾಗಿಯೂ ಉಷ್ಣತೆ ಹೆಚ್ಚಾದರೆ ವಿದ್ಯುತ್ ಸಂಪರ್ಕ ಸ್ವಯಂ ಕಡಿತಗೊಂಡು ಮತ್ತೆ 37.5 ಡಿ.ಸೆ.ಗೆ ಇಳಿಯುವಂತೆ ಮಾಡಲಾಗಿದೆ. 21 ದಿನ ಕಳೆಯುವಾಗ ಮರಿಗಳಾಗಿ ಹೊರಬರುತ್ತವೆ. ಈ ತಂತ್ರಜ್ಞಾನಕ್ಕೆ ಕೇವಲ ಅಳವಡಿಕೆಗೆ 100 ಸಾವಿರ ಮಾತ್ರ ಖರ್ಚಾಗಿದೆ.

ಕನಿಷ್ಠ ವೆಚ್ಚದಲ್ಲಿ ಮೊಟ್ಟೆಗೆ ಕಾವು ನೀಡುವ ತಂತ್ರಜ್ಞಾನ ಕೃಷಿಕರಿಗೆ ಲಾಭದಾಯವಾಗಲಿದೆ. ಸ್ವರ್ಣ ಕೋಳಿ, ನಾಟಿ ಕೋಳಿ, ಗಿರಿರಾಜ ಕೋಳಿ ಮೊಟ್ಟೆಗಳಿಗೆ ಈ ತಂತ್ರಜ್ಞಾನದಿಂದ ಕಾವು ನೀಡಬಹುದು ಎಂದು ಜರ್ನಾದನ ಗೌಡ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
