ಮೂಡುಬಿದಿರೆ: ಯಕ್ಷಗಾನವೆಂಬುದು ದ್ರಾವಿಡ ಮೂಲದ ರಂಗಪ್ರಕಾರವಾಗಿದ್ದು ಮನಸ್ಸಿಗೆ-ಬುದ್ಧಿಗೆ ಒಂದು ಚಿಕಿತ್ಸಕ ಮಾಧ್ಯಮವಾಗಿದೆ. ಯಕ್ಷಗಾನದ ಮೂಲಕ ದೈವ-ದೇವರುಗಳ ಆರಾಧನೆ ಪ್ರತಿ ಮನೆ-ಮನದತ್ತ ತಲುಪಿದ್ದು ಯಕ್ಷಗಾನದಂತಹ ಕಲಾ ಮಾಧ್ಯಮದ ಮೂಲಕ ಆರಾಧನಾ ಪರಂಪರೆ ಸರಿಯಾಗಲಿ ಎಂದು ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು.
ಪದ್ಮಾವತಿ ಕಲಾಮಂದಿರದಲ್ಲಿ ನಡೆದ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ “ಯಕ್ಷೋಚ್ಚಯ” ತುಳು ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ “ಜನಪದ ಸತ್ವ ಬೊಕ್ಕ ಯಕ್ಷಗಾನ” ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಜನಪದ ಜಗತ್ತಿನಲ್ಲಿರುವ ಭಾಷೆಯ ಮಹತ್ವವನ್ನು ತುಳುವಿನಲ್ಲಿ ಕಾಣಬಹುದು. ಕನ್ನಡ ಮತ್ತು ಪುರಾಣದ ಜೊತೆಗೆ ತುಳುನಾಡಿನ ಸಂಸ್ಕøತಿಯನ್ನು ಯಕ್ಷಗಾನದಲ್ಲಿ ಭಾಷಿಕ ರೂಪದಲ್ಲಿ ಹೇಗೆ ಕೊಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಪಾಡ್ದನ, ದೈವಾರಾಧನೆಯ ಭಾಷಿಕ ಪ್ರಕಾರವನ್ನು ಯಕ್ಷಗಾನದ ರಂಗಕ್ಕೆ ಭಾಷಿಕ ರೂಪದಲ್ಲಿ ತರುವ ಪ್ರಯತ್ನ ನಡೆಯಬೇಕು ಎಂದರು.
ದೈವಾರಾಧನೆ ಒಂದು ಸಮುದಾಯದ ಆಸ್ತಿಯಲ್ಲ:
ದೈವಾರಾಧನೆಯ ಹಕ್ಕು ಪ್ರತಿಯೋರ್ವರಿಗಿದ್ದು ಅದನ್ನು ಸಾಂಸ್ಕøತಿಕ ರಂಗದ ಮುಖೇನ ತೋರಿಸ ಬಹುದು. ದೈವ ಸಂಸ್ಕøತಿಯನ್ನು ಪಸರಿಸಬೇಕಾದರೆ ಯಕ್ಷಗಾನದಂತಹ ಕಲಾ ಮಾಧ್ಯಮ ಅನಿವಾರ್ಯವಾಗಿದೆ. ಇದರ ಬಗ್ಗೆ ತಿಳುವಳಿಕೆ ಇಲ್ಲದವರು ಇದನ್ನು ವಿರೋಧಿಸಿದ್ದಾರೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನವೆಂಬುದು ಜಾನಪದ ಕಲೆಯಾಗಿದ್ದು, ಅದು ಕಾಲ ಕಾಲಕ್ಕೆ ವಿನೂತನ ರೂಪವನ್ನು ಪಡೆದುಕೊಂಡು ಬರುತ್ತಿದೆ. ಯಕ್ಷಗಾನವನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಪ್ರಯತ್ನ ಎಲ್ಲ ಕಡೆ ನಡೆಯುತ್ತಿದೆ. ಕೇವಲ ಸರ್ಕಾರ, ಅಕಾಡೆಮಿ ಮಾತ್ರ ಕಾರ್ಯಮಾಡಬೇಕು ಎಂಬುದನ್ನು ಆಶಿಸದೆ ನಮ್ಮ ಕಲೆಯ ಉಳಿವಿಗಾಗಿ ನಾವೆಲ್ಲರೂ ಶ್ರಮವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮತ್ತು ಯಕ್ಷಗಾನ ಪ್ರಸಂಗ ಕರ್ತ ಅನಂತರಾಮ ಬಂಗಾಡಿಯವರಿಗೆ ಶ್ರೀ ಯಕ್ಷದೇವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಯಕ್ಷಗಾನ ಸ್ಫರ್ಧಾ ಫಲಿತಾಂಶ:
ಕಳೆದ ಮೂರು ದಿನಗಳಿಂದ ನಡೆದ ವೃತ್ತಿಪರ ಕಲಾವಿದರಿಗಾಗಿ ನಡೆದ ತುಳು ಯಕ್ಷಗಾನ ಸ್ಪರ್ಧೆಯಲ್ಲಿ ‘ಕೋರ್ದಬ್ಬು ಬಾರಗ’ ಪ್ರಸಂಗ ಪ್ರದರ್ಶಿಸಿದ ಸಿದ್ಧಕಟ್ಟೆಯ ಶ್ರೀ ಮಹಿಷಮರ್ಧಿನಿ ಯಕ್ಷಾಂತರಂಗ ತಂಡವು 25000 ನಗದು ಬಹುಮಾನದೊಂದಿಗೆ ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. ಬಾಲೆ ಮಾಣಿ ಮಾಯಂದಲೆ ಪ್ರಸಂಗ ಪ್ರದರ್ಶಿಸಿದ ಶ್ರೀ ಸತ್ಯದೇವತಾ ಯಕ್ಷಗಾನ ಕಲಾ ಮಂಡಳಿ ಕಾವೂರು ಇವರು 15,000 ನಗದು ಬಹುಮಾನದೊಂದಿಗೆ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು.
ಕೈರಂಗಳದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಸಾದರಪಡಿಸಿದ ಕುಡಿಯನ ಕಣ್ಣ್ ಪ್ರಸಂಗವು 10,000 ನಗದು ಬಹುಮಾನದೊಂದಿಗೆ ತೃತೀಯ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
ಇದೇ ವೇಳೆ ಸ್ಪರ್ಧಾ ತೀರ್ಪುಗಾರರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಎಂ.ಕೆ ರಮೇಶ್ ಆಚಾರ್ಯ, ಭಾಸ್ಕರ ರೈ ಕುಕ್ಕುವಳ್ಳಿ ಇವರನ್ನು ಗೌರವಿಸಲಾಯಿತು.
ಶ್ರೀ ಯಕ್ಷದೇವ ಮಿತ್ರ ಮಂಡಳಿಯ ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸಂಸ್ಥೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕರ್ನಾಟಕ ಬ್ಯಾಂಕ್‍ನ ಮಹಾಪ್ರಬಂಧಕ ಚಂದ್ರಶೇಖರ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಯಮಿ, ಮಂಡಳಿಯ ಗೌರವಾಧ್ಯಕ್ಷ ಕೆ.ಶ್ರೀ ಪತಿ ಭಟ್ ಸ್ವಾಗತಿಸಿದರು. ರವಿಪ್ರಸಾದ್ ಕೆ.ಶೆಟ್ಟಿ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
