ಬಂಟ್ವಾಳ: ಬಂಟ್ವಾಳ-ಮೂಡುಬಿದಿರೆ ನಡುವಿನ ರಸ್ತೆ ರಾಯಿ ಸಮೀಪದ ಬಾರ್ಜಾರು ಎಂಬಲ್ಲಿ ರಸ್ತೆ ಅಡ್ಡವಾಗಿ ಶುಕ್ರವಾರ ಬೆಳಿಗ್ಗೆ ಮರ ಮತ್ತು ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಕೆಲಹೊತ್ತು ವಾಹನ ಸಂಚಾರಕ್ಕೆ ಸ್ಥಗಿತಗೊಂಡಿತ್ತು.

ಶುಕ್ರವಾರ ಮುಂಜಾನೆ ಹಳೆ ಮರವೊಂದು ವಿದ್ಯುತ್ ತಂತಿಗೆ ಬಿದ್ದು ಬಳಿಕ ರಸ್ತೆಗೆ ಮುರಿದು ಬಿದ್ದಿದೆ. ಇದೇ ವೇಳೆ ವಿದ್ಯುತ್ ಕಂಬವೊಂದು ವಾಲಿಕೊಂಡರೆ, ಇನ್ನೊಂದು ಕಂಬ ಮುರಿದು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಇದರಿಂದಾಗಿ ಬಂಟ್ವಾಳ-ಮೂಡುಬಿದಿರೆ ನಡುವೆ ಬಸ್ ಮತ್ತಿತರ ವಾಹನ ಸಂಚಾರ ಕೆಲಹೊತ್ತು ಸ್ಥಗಿತಗೊಂಡು ವಿದ್ಯಾರ್ಥಿಗಳು ಮತ್ತು ವಿವಿಧೆಡೆ ಕೆಲಸಕ್ಕೆ ಹೋಗುವ ಜನರಿಗೆ ತೊಂದರೆ ಉಂಟಾಯಿತು. ತಕ್ಷಣವೇ ಸಿದ್ಧಕಟ್ಟೆ ಮೆಸ್ಕಾಂ ಸಹಾಯಕ ಎಂಜಿನಿಯರ್, ಲೈನ್‍ಮೆನ್ ಮತ್ತಿತರ ಸಿಬ್ಬಂದಿಗಳು ಬಂದು ಸ್ಥಳೀಯರ ಸಹಕಾರದಲ್ಲಿ ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ವಿದ್ಯುತ್, ದೂರವಾಣಿ, ಕುಡಿಯುವ ನೀರು ಪೂರೈಕೆ ಸ್ಥಗಿತ:
ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಗಾಳಿ ಮಳೆ ಮತ್ತು ಸಿಡಿಲಿನಿಂದಾಗಿ ಇಲ್ಲಿನ ಕೈತ್ರೋಡಿ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದು, ದೂರವಾಣಿ ಸಂಪರ್ಕ ಮತ್ತು ಕುಡಿಯುವ ನೀರಿನ ಪೂರೈಕೆಯೂ ಸ್ಥಗಿತಗೊಂಡಿದೆ. ಇದೀಗ ಮತ್ತೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
