ಗುರುಪುರ :ಹಿಂದೂತ್ವದ ಉಳಿವಿಗೆ ನನ್ನಿಂದ ಮುಂದೆಯೂ ಕೆಲಸವಾಗಲಿದೆ. ಇದು ಅಭಿಮಾನದ ಕೆಲಸ. ಸದಾ ಈ ದೇಶದ ಅಭಿವೃದ್ಧಿ ಕಾಳಜಿ ಹರಿಸಿರುವ ಪ್ರಧಾನಿ ಮೋದಿಗೆ ಮತ್ತೊಂದು ಬಾರಿ ದೇಶವಾಳುವ ಭಾಗ್ಯ ಸಿಗುವಂತಾಗಲಿ. ಆಗ ದೇಶ ಮತ್ತಷ್ಟು ಸುಭಿಕ್ಷವಾಗಲಿದೆ ಮತ್ತು ಹಿಂದೂತ್ವ ವಿಜೃಂಭಿಸಲಿದೆ ಎಂದು ಶ್ರೀ ರಾಜಶೇಖರಾನಂದ ಸ್ವಾಮಿಜಿ ಹೇಳಿದರು. ಅವರು ಭಾನುವಾರ ಗುರುಪುರ ವಜ್ರದೇಹಿ ಮಠದಲ್ಲಿ ವಿದ್ವಾನ್ ವಾಗೀಶ್ ಆಚಾರ್ಯ ಸುರತ್ಕಲ್ ಅವರಿಂದ 19ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಶ್ರವಣ ವೃತ ಕಥಾ ಪೂಜೆಯ ಬಳಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕರಿಗೆ ಸನ್ಮಾನ:
ಮೂಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್, ಸುಳ್ಯ ಶಾಸಕ ಅಂಗಾರ ಹಾಗೂ ಪುತ್ತೂರು ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸಕಾಮತ್ ಅವರಿಗೆ ಶಾಲು ಹೊದಿಸಿ, ಸನ್ಮಾನಿಸಲಾಯಿತು.
ಸನ್ಮಾನಕ್ಕುತ್ತರವಾಗಿ ಮಾತನಾಡಿದ ಶಾಸಕ ಕೋಟ್ಯಾನ್, ಪಕ್ಷದಲ್ಲಿ ಕಾರ್ಯಕರ್ತನಾಗಿದ್ದಾಗ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಈಗ ನಾನು ಈ ಕ್ಷೇತ್ರದ ಶಾಸಕನಲ್ಲದಿದ್ದರೂ ನನಗಿಲ್ಲಿ ಸನ್ಮಾನ ಲಭಿಸಿತು. ಇದೆಲ್ಲ ಯೋಗಭಾಗ್ಯ. ಸಮಯಪ್ರಜ್ಞೆಯಿಂದ ಸಮಾಜ ಸೇವೆಗೈಯುತ್ತಿದ್ದೇನೆ. ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ ಎಂದರು.
ಶಾಸಕ ಅಂಗಾರ ಮಾತನಾಡುತ್ತ, ಅಧಿಕಾರದಾಹಿಗಳು ನಾಯಕರಾಗಲು ಇಚ್ಚಿಸುತ್ತಾರೆ. ಅಂತಹವರಲ್ಲಿ ವ್ಯಕ್ತಿಗತ ಗುಣಧರ್ಮ ಇರುವುದಿಲ್ಲ. ಜಾತಿ, ಧರ್ಮ ಮುಂದಿಟ್ಟು ಒಬ್ಬರ ಕಾಲೆಳೆದು ಅಧಿಕಾರ ಪಡೆಯಲು ಹವಣಿಸಿದಾಗ, ವಿಚಾರಕ್ಕೆ ಬದ್ಧರಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಬಿಜೆಪಿ ವಿರುದ್ಧ ಇತರರು ಮಾತನಾಡಲು ಅವಕಾಶ ನೀಡಬಾರದು ಎಂದು ಹೇಳಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡುತ್ತ, ಸ್ವಾಮಿಗಳು ಹಿಂದೂತ್ವ ಉದ್ಧಾರಕ್ಕೆ ಕಠೋರ ನಿಲುವು ಹೊಂದಿದ್ದಾರೆ. ಅವರು ಹಿಂದೂಗಳ ಉದ್ಧಾರಕ್ಕೆ ನೈಜ ಕೆಲಸ ಮಾಡುತ್ತಾರೆ ಮತ್ತು ಅನ್ಯಾಯದ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಾರೆ. ಜಿಲ್ಲೆಯಿಂದ ಆಯ್ಕೆಯಾದ ಏಳು ಮಂದಿ ಬಿಜೆಪಿ ಶಾಸಕರು ಹಿಂದೂಗಳಿಗೆ ಅನ್ಯಾಯ, ಅವಮಾನ ಆಗದಂತೆ ಬದುಕಲು ಅವಕಾಶ ಮಾಡಿಕೊಡಲಿದ್ದಾರೆ. ಇದಕ್ಕೆ ಹಿಂದೂತ್ವವಾದಿಗಳು ಮತ್ತು ಸಮಾನ ಮನಸ್ಕರ ಬೆಂಬಲ ಅವಶ್ಯ ಎಂದು ವಿವರಿಸಿದರು. ಮಂಗಳೂರಿನ ಕಾನೂನು ತಜ್ಞ ಬಿ ಕೆ ನಾರಾಯಣರು ಚಾತುರ್ಮಾಸ್ಯ ಹಾಗೂ ಶ್ರೀ ವಜ್ರದೇಹಿ ಮಠದ ಶಕ್ತಿ-ಪ್ರಭಾವಗಳ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಲಯನ್ ಕಿಶೋರ್ ಡಿ. ಶೆಟ್ಟಿ, ಉದ್ಯಮಿ ದಿನೇಶ್ ಶೆಟ್ಟಿ ಇದ್ದರು. ಶ್ಯಾಂ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಪ್ರಕೃತಿ ವಿಪತ್ತಿನಲ್ಲಿ ಮೃತರಾದವರ ಆತ್ಮಸದ್ಗತಿಗಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಚಿತ್ರ9ವಿಪಿವಜ್ರದೇಹಿ
