ಮೂಡುಬಿದಿರೆ: “ಭವಿಷ್ಯದಲ್ಲಿ ದೇಶಗಳ ನಡುವಿನ ಕದನಗಳು ಬಂದೂಕುಗಳಿಂದಲ್ಲ, ಬದಲಾಗಿ ತಂತ್ರಜ್ಞಾನದ ಮೇಲೆ ನಡೆಯಲಿವೆ. ಹಾಗಾಗಿ ಇಂದಿನಿಂದಲೇ ಅದನ್ನು ಎದುರಿಸಲು ನಾವು ಸನ್ನದ್ಧರಾಗಬೇಕು” ಎಂದು ಬೆಂಗಳೂರಿನ ಸಿ-ಡ್ಯಾಕ್‍ನ ಹಿರಿಯ ನಿರ್ದೇಶಕ ಗಂಗಾಪ್ರಸಾದ್. ಜಿ. ಎಲ್ ಹೇಳಿದರು.
ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫೋರ್ಮೇಶನ್ ಸೈನ್ಸ್ ವಿಭಾಗ ಹಾಗೂ ಐಇಇಇ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ `ಅಪ್ಲೈಡ್ ಆ್ಯಂಡ್ ಥಿಯರಿಟಿಕಲ್ ಕಂಪ್ಯೂಟಿಂಗ್ ಆ್ಯಂಡ್ ಕಮ್ಯುನಿಕೇಶನ್ ಟೆಕ್ನಾಲಜಿ’ ಎಂಬ ವಿಷಯದ ಕುರಿತು ನಡೆಯುತ್ತಿರುವ ಎರಡು ದಿನಗಳ ನಾಲ್ಕನೇ ಅಂರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಒಂದು ಶಿಕ್ಷಣ ಸಂಸ್ಥೆಯ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಒಬ್ಬ ಉತ್ತಮ ಶಿಕ್ಷಕನಿಗೆ ಎರಡು ಗುಣಗಳು ಅತ್ಯವಶ್ಯ. ಒಂದು ವಿಷಯಜ್ಞಾನ, ಮತ್ತೊಂದು ಬೋಧನಾಕೌಶಲ್ಯ. ಇವೆರಡರಲ್ಲಿ ಯಾವುದಾದರೂ ಇಲ್ಲ ಎಂದರೆ, ಆತ ವಿದ್ಯಾರ್ಥಿಯ ಭವಿಷ್ಯ ರೂಪಿಸುವಲ್ಲಿ ಸೋಲಬೇಕಾಗುತ್ತದೆ. ಈ ಸಮಸ್ಯೆಯೇ ನಮ್ಮ ದೇಶದ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣ” ಎಂದು ವಿಷಾದ ವ್ಯಕ್ತಪಡಿಸಿದರು.
“ಎಷ್ಟು ಮಂದಿ ರ್ಯಾಂಕ್ ಪಡೆದರು, ಎಷ್ಟು ಸಂಖ್ಯೆ ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಉದ್ಯೋಗ ಪಡೆದರು ಎಂಬ ಆಧಾರದ ಮೇಲೆ ಸಂಸ್ಥೆಯ ಪ್ರಗತಿಯನ್ನು ಅಳೆಯಲಾಗುತ್ತದೆ. ಆದರೆ ಇದ್ಯಾವುದು ಅದರ ಮಾಪಕವಲ್ಲ. ಶಿಕ್ಷಣ ನಂತರ ಎಷ್ಟು ಜನ ಸ್ವ-ಉದ್ಯೋಗ ಆರಂಭಿಸಿದರು ಮತ್ತು ಹೊಸ ಹೊಸ ಆವಿಷ್ಕಾರಗಳಿಗೆ ತಮ್ಮನ್ನು ತೆರೆದುಕೊಂಡರು ಎಂಬುದರಲ್ಲಿ ಸಂಸ್ಥೆಯ ಯಶಸ್ಸು ಅಡಗಿದೆ ಎಂದು ಹೇಳಿದರು.
ವಿಜ್ಞಾನಕ್ಷೇತ್ರದಲ್ಲಿ ಮೈಲಿಗಲ್ಲು
“ಒಂದು ಕಾಲಘಟ್ಟದಲ್ಲಿ ಅಮೇರಿಕಾ ಭಾರತಕ್ಕೆ ಸೂಪರ್ ಕಂಪ್ಯೂಟರ್ ನೀಡಲು ನಿರಾಕರಿಸಿದ್ದರಿಂದ, ನಾವು ನಮ್ಮದೇ ಸೂಪರ್ ಕಂಪ್ಯೂಟರ್ ಉತ್ಪಾದಿಸಿ, ಇಂದು ಅದನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಅದರಂತೆ ಮೇಕ್‍ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿಯಂಥ ಯೋಜನೆಗಳು ನಮ್ಮನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ಕಾರ್ಯಗಳನ್ನು ಸಾಧಿಸಲು ಇಂಬು ನೀಡಿವೆ. ಸದ್ಯ ಅಭಿವೃದ್ಧಿಯ ಹಂತದಲ್ಲಿರುವ ಸ್ಪೀಚ್ ತಂತ್ರಜ್ಞಾನ, ನಮ್ಮ ಸಾಧನೆಗೆ ಹೊಸ ಸೇರ್ಪಡೆ” ಎಂದು ಸಂತಸ ವ್ಯಕ್ತಪಡಿಸಿದರು.
ಸ್ಪೀಚ್ ತಂತ್ರಜ್ಞಾನ
ಸ್ಪೀಚ್ ತಂತ್ರಜ್ಞಾನದ ಮುಖೇನ ಯಾವುದೇ ಭಾಷೆಯಲ್ಲಿರುವ ಭಾಷಣ ಅಥವಾ ಉಪನ್ಯಾಸದ ಸಾರವನ್ನು ನಮಗೆ ಬೇಕಾದ ಭಾಷೆಯಲ್ಲಿ ಕೇಳಬಹುದಾಗಿದೆ. ಭಾರತದ ಬಹುತೇಕ ಸ್ಥಳೀಯ ಭಾಷೆಗಳು ಸಹ ಇಲ್ಲಿ ಲಭ್ಯವಿರುತ್ತವೆ.

