ಮೂಡುಬಿದಿರೆ: ಚುರುಕುತನ ಮತ್ತು ತಂತ್ರಗಾರಿಕೆಯ ಕ್ರೀಡೆ ಖೋ-ಖೋ. ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂದು ಹಲವಾರು ಅವಕಾಶಗಳಿವೆ. ತಮ್ಮೊಳಗಿರುವ ಸಾಂಸ್ಕøತಿಕ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯು ಸ್ಪೂರ್ತಿಯಾದರೆ, ವಿವಿಧ ಆಟೋಟ ಸ್ಪರ್ಧೆಗಳು ಕ್ರೀಡಾ ವಿದ್ಯಾರ್ಥಿಗಳ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆ ನೀರ್ಕೆರೆಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ ಮತ್ತು ತೆಂಕಮಿಜಾರು ಪಂಚಾಯಿತಿಯ ನೇತೃತ್ವದಲ್ಲಿ ಶಾಲೆಗೆ ಅಳವಡಿಸಿರುವ ಸಿಸಿ ಕ್ಯಾಮರಾವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಮತ್ತು ಕ್ರೀಡೆಯಲ್ಲಿ ಮೂಡುಬಿದಿರೆಯ ವಿದ್ಯಾರ್ಥಿಗಳು ಈಗಾಗಲೇ ಸಾಧನೆ ಮಾಡಿ ಸದಾ ಗೆಲುವಿನ ಹಾದಿಯಲ್ಲಿದ್ದಾರೆ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಆತ್ಮವಿಶ್ವಾಸ, ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವ, ಸ್ಥಿತಪ್ರಜ್ಞೆಯನ್ನು ಮೂಡಿಸುವ ಮತ್ತು ಏಕಾಗ್ರತೆಯನ್ನು ಬೆಳೆಸುವ ಗ್ರಾಮೀಣ ಕ್ರೀಡೆ ಖೋ-ಖೋ. ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಕಲಿಕೆ ಮತ್ತು ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ಗಣಕಯಂತ್ರಾಧಾರಿತ ಬೋಧನೆಯನ್ನು ಶಾಲೆಯ ಎರಡು ಕೊಠಡಿಗಳಿಗೆ ಅಳವಡಿಸಲಾಗಿದ್ದು ಎಸ್‍ಡಿಎಂಸಿಯ ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಮೇಶ್ ಶೆಟ್ಟಿ, ರುಕ್ಮಯ ಗೌಡ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಗೋಪಾಲಗೌಡ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್, ಕಲ್ಲಮುಂಡ್ಕೂರು ಶಾಲೆಯ ಶಿಕ್ಷಕ ಶಂಕರ್ ನಾಯ್ಕ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ ಸ್ವಾಗತಿಸಿದರು. ಶಿಕ್ಷಕಿ ಸೆಲ್ಲಿನ್ ಪಿಂಟೋ ನಿರೂಪಿಸಿದರು. ಶಿಕ್ಷಕಿ ಮಂಜುಳಾ ವಂದಿಸಿದರು.

