ಕೈಕಂಬ : ಗುರುಪುರಗ್ರಾಮ ಪಂಚಾಯತಿ ವ್ಯಾಪ್ತಿಯ ಅಡ್ಡೂರು ಸಮೀಪದ ಕಿನ್ನಿಮಜಲು ಬೆಳ್ಳೂರಿನ ಯುವಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಜಾನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗೋಪಾಲ ಮತ್ತು ಪದ್ಮಾವತಿಯ ಪುತ್ರ ದಿವಾಕರ ಅಲಿಯಾಸ್ ರಾಜೇಶ್ ಅಂಚನ್(38) ಎಂದು ಗುರುತಿಸಲಾಗಿದೆ. ವಿವಾಹಹಿತನಾದ ಈತ ಪತ್ನಿಯನ್ನು ಬಿಟ್ಟು ದೊಡ್ಡಮ್ಮನ ಮನೆಯಲ್ಲಿ ವಾಸಿಸುತ್ತಿದ್ದ.
ಮಂಗಳೂರು ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿಕೋಳುತ್ತಿದ್ದ ಈತ ಯಾವುದೋ ಒಂದು ತುಳು ಚಿತ್ರದಲ್ಲಿ ಸೈಡ್ ರೋಲ್ ಮಾಡಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಈತ, ಯುವಕ-ಯುವತಿಯರಿಗೆ ಚಿತ್ರದಲ್ಲಿ ಅವಕಾಶ ತೆಗೆಸಿಕೊಡುವುದಾಗಿ ಹೇಳಿ ಕೆಲವರನ್ನು ತನ್ನ ಬಲೆಗೆ ಹಾಕಿಕೊಂಡಿದ್ದ ಎನ್ನಲಾಗಿದೆ.
ಹೆಂಡತಿ ಮನೆ ಬಿಟ್ಟ ಬಳಿಕ ಈತನ ಮನೆಗೆ ಹಲವು ಯುವತಿಯರು ಬರುತ್ತಿದ್ದರು. ಅಂತೆಯೇ ಇತ್ತೀಚೆಗೆ ಮೂಡುಶೆಡ್ಡೆಯ ಯುವತಿಯೊಬ್ಬಳು ಆಗಮಿಸುತ್ತಿದ್ದು, ಕಳೆದ ರಾತ್ರಿ ಇವರಿಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ವೈಮನಸ್ಸು ಏರ್ಪಟ್ಟು, ಯುವತಿಗೆ ಚೂರಿಯಿಂದ ಇರಿದಿದ್ದಾನೆ.
ಪರಿಣಾಮ ಯುವತಿ ಮೈಮೇಲೆ ಗಾಯದೊಂದಿಗೆ ರಕ್ತ ಕಲೆಯಾಗಿತ್ತು. ಈಕೆಯನ್ನು ಬೆಳಿಗ್ಗೆ ಬಂಡಸಾಲೆಯಿಂದ ಯಾರೋ ರಿಕ್ಷಾದಲ್ಲಿ ವಾಮಂಜೂರಿನತ್ತ ಕೊಂಡೊಯ್ದಿದ್ದಾರೆ. ಗಾಯಗೊಂಡಿದ್ದ ಈಕೆ ಮೃತಪಟ್ಟಿದ್ದಾಳೆಂದು ಭೀತಿ ವ್ಯಕ್ತಪಡಿಸಿದ ದಿವಾಕರ, ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಬಜ್ಪೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆಗೆ ಮುನ್ನ ಈತ 15 ಪುಟಗಳ ಪತ್ರ ಬರೆದಿದ್ದು, ಅದನ್ನಾಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿತ್ರ29ವಿಪಿದಿವಾಕರ

