ಮೂಡುಬಿದಿರೆ: “ನಮ್ಮ ಹೃದಯಕ್ಕೆ ಹತ್ತಿರವಿರುವ ಭಾಷೆಯಂತಿದ್ದರೆ ಅದುವೇ ಕನ್ನಡ”. ಕನ್ನಡ ಎಂದೊಡನೆ ಅಸಡ್ಡೆ, ನಿರ್ಲಕ್ಷ್ಯ ಬೇಡ. ಎಲ್ಲವೂ ಸರಿಸಮಾನ ಎಂದು ಭಾವಿಸಿ ನಮ್ಮದೇ ಆದ ಭಾಷಾ ಪ್ರೇಮವನ್ನು ಎಲ್ಲೆಡೆ ಹರಡಬೇಕು ಎಂದು ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಹಾಗೂ ಪ್ರಭಾರ ಪ್ರಾಂಶುಪಾಲರಾದ ಡಾ. ಪಿ.ಬಿ ಪ್ರಸನ್ನರವರು ಅಭಿಪ್ರಾಯಪಟ್ಟರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದಿಂದ ಸಾಹಿತ್ಯ ಸಂಘದ ಉದ್ಘಾಟನ ಸಮಾರಂಭವನ್ನು ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ಶನಿವಾರದಂದು ಆಯೋಜಿಸಲಾಗಿತ್ತು. ‘’ಕನ್ನಡ ನಮಗೇಕೆ ಬೇಕು’’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಕನ್ನಡ ಎಂದು ಕೇವಲ ಬಾಯಿ ಮಾತಿಗೆ ಹೇಳಿದರೆ ಸಾಲದು ಕನ್ನಡವನ್ನು ಉಳಿಸಿ, ಬಳಸಿ, ಬೆಳೆಸುವ ಕೆಲಸವನ್ನು ಮಾಡಬೇಕು. ಕನ್ನಡವನ್ನ ಅರ್ಥಮಾಡಿಕೊಳ್ಳುವುದು ಎಂದರೆ ಕೇವಲ ಭಾಷೆಯನ್ನಲ್ಲ, ಅದರ ಸಂಸ್ಕøತಿಯನ್ನ, ಆಚಾರ ವಿಚಾರಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ಇತರೆ ಭಾಷೆಗಳನ್ನು ಎಷ್ಟು ಆಸಕ್ತಿಯಿಂದ ಕಲಿಯುತ್ತಿವೋ ಹಾಗೇ ಕನ್ನಡವನ್ನೂ ಸಹ ಕಲಿಯಬೇಕು.
ಕನ್ನಡ ಭಾಷಾ ಪ್ರೇಮ ಎಂತಹುದೆಂದರೆ, ಸುತ್ತ ಮುತ್ತಲಿನ ಜನರ ನಡುವೆ ಪ್ರೀತಿಯನ್ನೂ ಅರಳಿಸಿ ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನೂ ಹುಟ್ಟು ಹಾಕುತ್ತದೆ. ಭಾಷೆಯನ್ನ ಅದರ ಧ್ವನಿಯನ್ನ ಮತ್ತು ಅರ್ಥವನ್ನ ಗ್ರಹಿಸಬೇಕಾದರೆ, ನಾವು ನಮ್ಮ ನಮ್ಮ ಅಂತರಂಗದೊಳಗಿನ ಮಾತುಗಳನೆಲ್ಲವನ್ನೂ ಸಹ ನಾವು ಆಲಿಸಬೇಕು ಎಂದರು.
ಕನ್ನಡ ಭಾಷೆಯ ಅಭಿವ್ಯಕ್ತಿಯನ್ನ ನೀವು ಈ ಸಂದರ್ಭದಲ್ಲಿ ಸರಿಯಾಗಿ ಕಲಿಯದಿದ್ದರೆ, ಮುಂದೊಂದು ದಿನ ನಗೆಪಾಟಲಿಗೀಡಾಗಬೇಕಾಗುತ್ತದೆ. ಅಂದದ ಬರವಣಿಗೆ ಸ್ಪಷ್ಟವಾದ ಉಚ್ಚಾರವೊಂದಿದ್ದರೆ ಸಾಕು ನೀವು ಎಲ್ಲಿಯಾದರೂ ಮುನ್ನಡೆಯನ್ನು ಸಾಧಿಸಬಹುದು. ಕನ್ನಡವನ್ನ ಇಂತಹವರೆ ಕಲಿಯಬೇಕು ಎಂಬ ಯಾವುದೇ ನಿರ್ಭಂದವಿಲ್ಲ. ಎಂತವರಾದರೂ ಸರಿಯೇ ಕನ್ನಡವನ್ನೂ ಕಲಿತು ಅದ್ಬುತ ಬರಹಗಾರರಾಗಬಹುದು. ಬದುಕನ್ನು ನಮ್ಮ ಜೀವನವನ್ನು ಅರಳಿಸುವ ಈ ಕನ್ನಡ ಒಂದಿದ್ದರೆ ಸಾಕಲ್ಲವೇ? ಕೆರಳಿಸುವಂತಹ, ಆಕ್ರೋಶಭರಿತರನ್ನಾಗಿಸುವ ಭಾಷೆಗಳು ನಮಗೇಕೆ ಬೇಕು ಎಂದು ಪ್ರಶ್ನಿಸಿದರು.
ಈ ಸಮಾರಂಭದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಶುಂಪಾಲರಾದ ಪ್ರೋ. ರಮೇಶ್ ಶೆಟ್ಟಿರವರು ಉಪಸ್ಥಿತರಿದ್ದರು.



