ಕಾಸರಗೋಡು: ಕಣ್ಣೂರು ವಲಯ ಆರೆಸ್ಸೆಸ್ ಶಾರೀರಿಕ್ ಪ್ರಮುಖ್ ಎಲ್ಲಂತೊಟ್ಟಿಲ್ ಮನೋಜ್(42) ಹತ್ಯೆಯ ಹಿನ್ನೆಲೆಯಲ್ಲಿ ಮಂಗಳವಾರ ಕರೆ ನೀಡಿದ್ದ ಕೇರಳ ಬಂದ್ ಸಂದರ್ಭ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ಹತ್ಯೆಯನ್ನು ಖಂಡಿಸಿ ಆರೆಸ್ಸೆಸ್ ಹಾಗೂ ಸಂಘ ಪರಿವಾರ ಮಂಗಳವಾರ ಮುಂಜಾನೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಂದ್ ಕರೆ ನೀಡಲಾಗಿತ್ತು. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಣ್ಣೂರು ಜಿಲ್ಲೆಯಲ್ಲಿ ಬಂದ್ ಸಂದರ್ಭ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಸಂದರ್ಭ ಉದ್ಭವಿಸಿದ ಗಲಾಟೆ ಕಲ್ಲು ತೂರಾಟದ ಹಂತದವರೆಗೆ ತಲುಪಿತ್ತು. ಪೊಲೀಸರು ಜನರನ್ನು ಚದುರಿಸಲು ಲಾಠಿಛಾಜರ್್ ಮಾಡಿದ್ದರಿಂದ ಹಲವರು ಗಾಯಗೊಂಡರು. ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಕಾಸರಗೋಡಿನಲ್ಲಿ ಬಂದ್ ಇರಲಿಲ್ಲವಾದರೂ ಅಂಗಡಿ ಮುಂಗಟ್ಟು, ಶಾಲಾ ಕಾಲೇಜುಗಳು ಹಾಗೂ ಬೆರಳೆಣಿಕೆ ಬಸ್ಗಳು ಮಾತ್ರವೇ ಇತ್ತು. ಮನೋಜ್ ಹತ್ಯೆ ಖಂಡಿಸಿ ಹಾಕಿದ್ದ ಬ್ಯಾನರ್ಗಳಿಗೆ ಗುಂಪೊಂದು ಹಾನಿ ಮಾಡುವುದನ್ನು ಜೈಹಿಂದ್ ದೃಶ್ಯ ಮಾಧ್ಯಮದ ವರದಿಗಾದ ಜಿತು ಯಾನೆ ಜಿತೇಂದ್ರ ಎಂಬವರು ಚಿತ್ರೀಕರಿಸುತ್ತಿದ್ದರು. ಈ ಸಂದರ್ಭ ಗುಂಪೊಂದು ಅವರ ಮೇಲೆ ಹಲ್ಲೆಗೈದು ಕೆಮರಾಕ್ಕೆ ಹಾನಿ ಮಾಡಿದೆ.
ಆರೋಪಿಗಳಿಗೆ ಮುಂದುವರಿದ ಶೋಧ:
ಆರೆಸ್ಸೆಸ್ ನಾಯಕ ಎಲ್ಲಂತೊಟ್ಟಿಲ್ ಮನೋಜ್ ಹತ್ಯೆಯನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆಸಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಸಿಪಿಐಎಂನ ಎಂಟು ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಶೊಧ ಕಾರ್ಯ ಮುಂದುವರಿಸಿದ್ದಾರೆ.






