ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ರಾತ್ರಿ 12ಗಂಟೆ ತನಕ ನದಿ ತೀರದ ಜನರ ನಿದ್ದೆಗೆಡಿಸಿ, ಉಕ್ಕಿ ಹರಿದ ನೆರೆ ಶುಕ್ರವಾರ ಬೆಳಿಗ್ಗೆಯಿಂದಲೇ ನಿಧಾನವಾಗಿ ಇಳಿಮುಖಗೊಂಡಿದೆ. ಗುರುವಾರ ಬೆಳಿಗ್ಗೆ ಗರಿಷ್ಟ ಅಪಾಯ ಮಟ್ಟ 9 ಮೀಟರ್ ದಾಟಿದ್ದ ನೀರಿನ ಮಟ್ಟವು ರಾತ್ರಿ 12 ಗಂಟೆ ವೇಳೆಗೆ ಕಳೆದ 1974ರ ಬಳಿಕ ಎರಡನೇ ಬಾರಿಗೆ 10.6 ಮೀ.ತಲುಪಿತ್ತು. ಇದರಿಂದಾಗಿ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಹಿತ ಇಲ್ಲಿನ ತಗ್ಗು ಪ್ರದೇಶದ ನಾಗರಿಕರ ಆತಂಕೀಡಾಗಿದ್ದರು.

ಇನ್ನೊಂದೆಡೆ 11ಮೀಟರ್ ಎತ್ತರದ ತುಂಬೆ ಹೊಸ ಅಣೆಕಟ್ಟೆಯಲ್ಲಿಯೂ 9 ಮೀಟರ್ನಿಂದ 7 ಮೀಟರಿಗೆ ಇಳಿಮುಖವಾಗಿದೆ. ತಾಲ್ಲೂಕಿನ ನಾವೂರು ಮತ್ತು ಪಾಣೆಮಂಗಳೂರಿನ ಆಲಡ್ಕ ತಗ್ಗು ಪ್ರದೇಶಗಳಿಂದ ಒಟ್ಟು 62 ಮನೆಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಮೂರು ಕಡೆ 150 ಮಂದಿಗೆ ಗಂಜಿ ಕೇಂದ್ರ ತೆರೆಯಲಾಗಿದೆ. ತಾಲ್ಲೂಕಿನಲ್ಲಿ ಹಲವೆಡೆ ಮನೆ ಮತ್ತು ಆವರಣ ಗೋಡೆ ಕುಸಿತದಿಂದ ರೂ 4.9ಲಕ್ಷ ಮೊತ್ತದ ನಷ್ಟ ಸಂಭವಿಸಿದೆ. ಇದೀಗ ನದಿ ನೀರಿನ ಮಟ್ಟ 8 ಮೀ.ಗಿಂತಲೂ ಇಳಿಮುಖವಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
