ಮೂಡುಬಿದಿರೆ : ಅ.15ರಿಂದ ಪ್ಲಾಸ್ಟಿಕ್‍ನ್ನು ನಿಷೇಧಗೊಳಿಸುವ ಹಿನ್ನಲೆಯಲ್ಲಿ ಮೂಡುಬಿದಿರೆ ಪುರಸಭೆಯು ಮಾರ್ಕೆಟ್‍ನ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಪ್ಲಾಸ್ಟಿಕ್ ಬಳಸದಂತೆ ತಿಳಿಸಿ ಗ್ರಾಹಕರು ತಂದಿರುವ ಪ್ಲಾಸ್ಟಿಕ್ ಹಾಗೂ ಪಾಲಿತೀನ್ ಚೀಲಗಳನ್ನು ತೆಗೆದುಕೊಂಡು ಅವರಿಗೆ ಬಟ್ಟೆಯ ಚೀಲಗಳನ್ನು ಮತ್ತು ಗುಲಾಬಿ ಹೂಗಳನ್ನು ನೀಡುವ ಮೂಲಕ ಶುಕ್ರವಾರದಂದು ಜಾಗೃತಿ ಮೂಡಿಸಲಾಯಿತು.
ವಾರದ ಸಂತೆಯ ದಿನವಾಗಿರುವ ಶುಕ್ರವಾರದಂದು ಮಾರ್ಕೆಟ್‍ನಲ್ಲಿ ಹೆಚ್ಚು ಜನರು ಸೇರುವುದರಿಂದ ಪುರಸಭಾಧಿಕಾರಿಗಳು ಕಳೆದ ಆ.3 ಶುಕ್ರವಾರ ಪ್ಲಾಸ್ಟಿಕ್ ಬಳಸದೆ ಬಟ್ಟೆ ಚೀಲಗಳನ್ನು ಜನರಿಗೆ ಮಾಹಿತಿ ನೀಡಿದ್ದರು. ಇದೀಗ ಈ ವಾರ ಬಟ್ಟೆಯ ಚೀಲಗಳನ್ನು ತಂದು, ಗ್ರಾಹಕರು ಹಣ್ಣು ತರಕಾರಿಗಳನ್ನು ತೆಗೆದುಕೊಂಡು ಹೋಗಲು ತಂದಿದ್ದ ಪ್ಲಾಸ್ಟಿಕ್‍ಗಳನ್ನು ತೆಗೆದುಕೊಂಡು ” ಆ.15ರಿಂದ ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಡಿ. ನಿಮ್ಮ ಕೈಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಕಂಡರೆ ದಂಡ ವಿಧಿಸಲಾಗುವುದು” ಎಂದು ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ತಿಳಿಸಿದರು.
ವ್ಯಾಪಾರಸ್ಥರು ಮತ್ತು ಪುರಸಭಾಧಿಕಾರಿಗಳ ಮಧ್ಯೆ ಮಾತಿನ ಚಕಾಮಕಿ
ಪುರಸಭಾಧಿಕಾರಿಗಳು ಮಾರ್ಕೆಟ್‍ನಲ್ಲಿ ಪ್ಲಾಸ್ಟಿಕ್ ಬಗ್ಗೆ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಜಾಗೃತಿ ನೀಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಒಂದಿಬ್ಬರು ವ್ಯಾಪಾರಸ್ಥರು ಮತ್ತು ಓರ್ವ ಗ್ರಾಹಕರು ಮಾತನಾಡಿ, ಮೊದಲು ಹಾಲಿನ ಪ್ಯಾಕ್‍ನಲ್ಲಿರುವ ಪ್ಲಾಸ್ಟಿಕನ್ನು ಮತ್ತು ಪ್ಲಾಸ್ಟಿಕ್ ತಯಾರಿಸುವ ಕಂಪನಿಗಳನ್ನು ನಿಷೇಧಿಸಿ ಆಮೇಲೆ ಬೇರೆ ಪ್ಲಾಸ್ಟಿಕನ್ನು ನಿಷೇಧಿಸಿ. ನೀವು ನಮಗೆ 15ರ ನಂತರ ಪ್ಲಾಸ್ಟಿಕ್ ನಿಷೇಧ ಎಂದು ಹೇಳಿ ಇದೀಗ ಪೊಲೀಸರೊಂದಿಗೆ ಬಂದು ಹೆದರಿಸುತ್ತೀದ್ದೀರೆಂದು ಆರೋಪಿಸಿ ನಮಗೆ ಮೊದಲು ಮಾರ್ಕೆಟನ್ನು ಸರಿಪಡಿಸಿ ಕೊಡಿ ಆಮೇಲೆ ನಿಮ್ಮ ಕಾನೂನುಗಳನ್ನು ಮಾಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೀಗ ನಾವು ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಜಾಗೃತಿ ಮೂಡಿಸುತ್ತಿದ್ದೇವೆ ಹೊರತು ದಂಡ ಹಾಕುತ್ತಿಲ್ಲ. ಆ.15ರಿಂದ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತವೆ. ಹಾಲಿನ ಪ್ಯಾಕ್‍ಗಳ ಬಗ್ಗೆ ಕ್ರಮ ಕೈಗೊಳ್ಳಲು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳಿದ್ದಾರೆ. ಅದನ್ನು ಅವರು ನೋಡಿಕೊಳ್ಳುತ್ತಾರೆ. ನಾವೀಗ ನಮ್ಮ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಪುರಸಭಾ ಸದಸ್ಯ ರತ್ನಾಕರ ದೇವಾಡಿಗ ವ್ಯಾಪಾರಸ್ಥರಿಗೆ ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್, ಪುರಸಭಾ ಕಂದಾಯ ನಿರೀಕ್ಷಕ ಧನಂಜಯ, ದ್ವಿ.ದ.ಸ ಮಂಜುನಾಥ್, ನೀರು ಸರಬರಾಜು ಸಿಬಂದಿ ಆನಂದ ಬಾಬು, ಕಛೇರಿ ವ್ಯವಸ್ತಾಪಕ ಸೂರ್ಯಕಾಂತ ಖಾರ್ವಿ ಮತ್ತು ಕಂಪ್ಯೂಟರ್ ಅಪರೇಟರ್ ಸುಧೀಶ್ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.

