ಮೂಡುಬಿದಿರೆ: ತುಳುನಾಡಿನ ಬಗ್ಗೆ ಹೊರ ಜಿಲ್ಲೆಯವರಿಂದ ಅನ್ಯಾಯ ಮತ್ತು ಅವಮಾನ ಆಗುತ್ತಿದೆ. ತುಳು ಪ್ರತ್ಯೇಕ ರಾಜ್ಯದ ಪರ ಧ್ವನಿ ಎತ್ತುವವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾರ್ಹ ಪೋಸ್ಟ್‍ಗಳನ್ನು ಹಾಕಲಾಗುತ್ತಿದೆ. ತುಳುನಾಡಿನ ಬಗ್ಗೆ ಇಂತಹ ಅವಮಾನವನ್ನು ಇನ್ನು ಸಹಿಸುವುದಿಲ್ಲ. ತುಳು ಪ್ರತ್ಯೇಕ ರಾಜ್ಯಕ್ಕೆ ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ನಮ್ಮ ಜವನೆರ್ ಬೆದ್ರ ಎಚ್ಚರಿಸಿದೆ.

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮ್ಮ ಜವನೆರ್ ಬೆದ್ರದ ಅಧ್ಯಕ್ಷ ಅಮರ್ ಕೋಟೆ, ತುಳು ರಾಜ್ಯದ ಬಗ್ಗೆ ಧ್ವನಿ ಎತ್ತಿದವರ ವಿರುದ್ಧ ನಟರಾಜ್ ಪೂಜಾರ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸಿದ್ದಾರೆ. ತುಳುನಾಡಿನ ಸಿನಿಮಾ ತಾರೆಯರಾದ ಸುನಿಲ್ ಶೆಟ್ಟಿ, ಐಶ್ವರ್ಯಾ ರೈ, ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ಅವರನ್ನು ಹಾಗೂ ಯುವ ವಾಗ್ಮಿ ಸಹನಾ ಕುಂದರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಪದಗಳಿಂದ ಟೀಕಿಸಲಾಗುತ್ತಿದೆ. ಪ್ರತ್ಯೇಕ ತುಳು ರಾಜ್ಯ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದರು. ರಾಜಕೀಯದ ಹೆಸರಿನಲ್ಲಿ ತುಳುನಾಡನ್ನು ಕಡೆಗಣಿಸಲಾಗುತ್ತಿದೆ. ಇಂತಹ ಘಟನೆಗಳಿಗೆ ರಾಜ್ಯ ಸರ್ಕಾರದ ನಿರ್ಲಕ್ಷ ಕೂಡ ಕಾರಣ ಎಂದು ಅವರು ಆರೋಪಿಸಿದರು.
15ಕ್ಕೆ ಮೂಡುಬಿದಿರೆಯಲ್ಲಿ ರಾಣಿ ಅಬ್ಬಕ್ಕ ಸ್ಮರಣೆ
ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಉತ್ಸವ ಉಳ್ಳಾಲಕ್ಕೆ ಮಾತ್ರ ಸೀಮಿತವಾಗಿದೆ. ಇದನ್ನು ರಾಜ್ಯ ವ್ಯಾಪಿ ವಿಸ್ತರಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ವಿಧಾನ ಸೌಧದಲ್ಲೂ ಅಬ್ಬಕ್ಕಳ ಉತ್ಸವ ಆಚರಣೆಯಾಗಬೇಕು. ರಾಜಧಾನಿಯಲ್ಲಿ ಆಕೆಯ ಪ್ರತಿಮೆ ಸ್ಥಾಪನೆಯಾಗಬೇಕು. ಆಗಸ್ಟ್ 15ಕ್ಕೆ ಮೂಡುಬಿದಿರೆಯಲ್ಲಿ ರಾಣಿ ಅಬ್ಬಕ್ಕಳ ಸಂಸ್ಮರಣೆ ಹಾಗೂ ಲಾಂಛನ ಬಿಡುಗಡೆ ಮಾಡಲಾಗುವುದು. ಪ್ರತಿ ಶಾಲೆಗಳಲ್ಲಿ ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಚನೆ ಇದೆ. ಮೂಡುಬಿದಿರೆ ಬಸ್‍ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರಿಡಬೇಕೆಂದು ನಾವು ಪುರಸಭೆಯನ್ನು ಆಗ್ರಹಿಸುತ್ತೇವೆ ಎಂದರು.
ಪ್ರತ್ಯೇಕ ತುಳು ರಾಜ್ಯಕ್ಕೆ ಆಗ್ರಹಿಸಿದವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸಿದ ನಟರಾಜ್ ಪೂಜಾರ್ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅಮರ್ ಕೋಟೆ ತಿಳಿಸಿದರು. ಸುನಿಲ್ ಪಣಪಿಲ, ನಾಗವರ್ಮ ಜೈನ್, ಶಿವಪ್ರಸಾದ್, ರಂಜಿತ್ ಶೆಟ್ಟಿ, ಶುಭಕರ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
