ಬಂಟ್ವಾಳ: ಬಂಟ್ವಾಳ ತಾಲೂಕು ಉಳಿ ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೂತನ ಬ್ರಹ್ಮರಥದ ನಿರ್ಮಾಣ ಕುರಿತು ಜೀರ್ಣೋದ್ಧಾರ ಸಮಿತಿ, ಗೌರವ ಸದಸ್ಯರ ಮತ್ತು ಭಕ್ತಾಧಿಗಳ ವಿಶೇಷ ಸಭೆ ನಡೆಯಿತು.
ಶ್ರೀ ಕ್ಷೇತ್ರ ಕಕ್ಯಬೀಡಿಗೆ ಇದೇ ವರ್ಷದ ಕೊನೆಯ ಭಾಗದಲ್ಲಿ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡು ಸೇವೆಗೆ ಸಿದ್ದವಾಗಲಿದೆ ಎಂದು ಶ್ರೀ ಕ್ಷೇತ್ರ ಕಕ್ಯಬೀಡು ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಯು. ದಾಮೋದರ ನಾಯಕ್ ಹೇಳಿದರು.
ದೇವಸ್ಥಾನದಲ್ಲಿ ವಾರ್ಷಿಕ ಚೌತಿ ಹಬ್ಬ, ನಾಲೇರು ಮುಂಡೇವು ಮತ್ತು ನವರಾತ್ರಿ ಹಬ್ಬ ಆಚರಣೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಜೀರ್ಣೋದ್ಧಾರ ಸಮಿತಿ ಸ್ಥಾಪಕ ಅಧ್ಯಕ್ಷ ಕೆ. ಜಾರಪ್ಪ ಶೆಟ್ಟಿ ಅವರು ಮಾತನಾಡಿ, ನೂತನ ಬ್ರಹ್ಮರಥದಲ್ಲಿ ದೇವರ ರಥೋತ್ಸವ ನಡೆಸುವುದು ನಮಗೆ ಒದಗಿರುವ ಸೌಭಾಗ್ಯ. ಇದಕ್ಕಾಗಿ ರಥ ನಿರ್ಮಾಣ ಕಾರ್ಯದಲ್ಲಿ ತನು ಮನ ಧನ ರೂಪದಲ್ಲಿ ಸಹಕಾರವನ್ನು ನೀಡಬೇಕೇಂದು ತಿಳಿಸಿದರು. ಸುಮಾರು 40 ಲಕ್ಷ ರೂ.ವೆಚ್ಚದಲ್ಲಿ ಮೂಡಬಿದಿರೆಯ ಅಶ್ವಥಪುರದಲ್ಲಿ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ಶೇ.40 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಕೇರ್ಯ ಸಂಜೀವ ಪೂಜಾರಿ ಅವರು 1.15 ಲಕ್ಷ ರೂ., ಕಂರ್ಬಡ್ಕ ಚಂದ್ರಶೇಖರ ಅವರು 1 ಲಕ್ಷ ರೂ., ಕೊರಗಪ್ಪ ಯಾನೆ ಚಂದ್ರ ಪೂಜಾರಿ ಅವರು 45 ಸಾವಿರ ರೂ., ಕೆ. ಸೀತಾರಾಮ ಶೆಟ್ಟಿ ಅವರು 15 ಸಾವಿರ ರೂ., ಬಲ್ಲೋಡಿಗುತ್ತು ಪದ್ಮಶೇಖರ ಜೈನ್ ಅವರು 15 ಸಾವಿರ ರೂ., ಮಹಮ್ಮಾಯಿ ನಾರಾಯಣ ಗೌಡ, ತೀರ್ಥೇಶ್ ತಲಾ 5 ಸಾವಿರ ರೂ.ಗಳ ದೇಣಿಗೆ ಸ್ವೀಕರಿಸಲಾಯಿತು. ಆಸಕ್ತ ಭಕ್ತರಿಂದ ತಲಾ 10 ಸಾವಿರ ರೂ.ಗಳ ಮರು ಪಾವತಿ ಆಧಾರದಲ್ಲಿ ಸಂಗ್ರಹ, ತಲಾ 5000 ರೂ.ವಂತಿಗೆ ರೂಪದಲ್ಲಿ ಸಂಗ್ರಹ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಕ್ಷೇತ್ರ ಮೊಕ್ತೇಸರ ರಾಜವೀರ ಮೂಡಬಿದಿರೆ, ಅರ್ಚಕ ಶ್ರೀನಿವಾಸ ಅರ್ಮುಡ್ತಾಯ, ರಾಜೇಂದ್ರ ಕೆ., ಉಳಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ. ಚೆನ್ನಪ್ಪ ಸಾಲಿಯಾನ್, ಕಕ್ಯಪದವು ಗರಡಿ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಗ್ರಾ.ಪಂ. ಸದಸ್ಯರಾದ ಕೆ ಚಿದಾನಂದ ರೈ, ಚೇತನ್ ಊರ್ದೊಟ್ಟು, ಸಂಜೀವ ಗೌಡ ಅಗ್ಪಲ, ಜೀರ್ಣೋದ್ಧಾರ ಸಮಿತಿಯ ಪಿ. ವಾಸುದೇವ ಮಯ್ಯ, ವಿಶ್ವನಾಥ ಸಾಲಿಯಾನ್, ರಾಮಯ್ಯ ಭಂಡಾರಿ, ಸ್ಥಳೀಯರಾದ ಕೇರ್ಯ ಸಂಜೀವ ಪೂಜಾರಿ, ಕಿಂಜಾಲು ಜಯ ಶೆಟ್ಟಿ, ಕಕ್ಯ ಸೀತಾರಾಮ ಶೆಟ್ಟಿ, ಮಜಲು ವಾಸು ಪೂಜಾರಿ ಮತ್ತು ನಿವೃತ್ತ ಶೀಕ್ಷಕ ಮುತ್ತಪ್ಪ ಗೌಡ ಹಾಗೂ ಶ್ರೀ ಕ್ಷೇತ್ರ ಕಕ್ಯಬೀಡಿನ ಸದಸ್ಯರು, ವಿವಿದ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಕ್ಷೇತ್ರದ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಯು. ದಾಮೋದರ ನಾಯಕ್ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಬಿ. ನಾರಾಯಣ ರೈ ವಂದಿಸಿದರು.

