ಮೂಡುಬಿದಿರೆ : ಮಂಗಳೂರು ವಿ.ವಿ.ಯಲ್ಲಿ ಎಸ್‍ಸಿಎಸ್‍ಟಿ, ಪಿಜಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ಸೋಲಾರ್ ವ್ಯವಸ್ಥೆ, ದೂರ ಶಿಕ್ಷಣ ಕಾರ್ಯಕ್ರಮದಲ್ಲಿ ಅವ್ಯವಹಾರ ಹಾಗೂ ಪರೀಕ್ಷಾ ಗಣಕೀಕರಣದಲ್ಲಿ ವೈಫಲ್ಯ ಉಂಟಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದರ ಮೂಲಕ ಭ್ರಷ್ಟಾಚಾರಗಳ ಸರಮಾಲೆಯೇ ನಡೆದಿದ್ದು ಇವುಗಳ ಬಗ್ಗೆ ನಿಷ್ಪಕ್ಷ ತನಿಖೆಯಾಗಬೇಕು ಅಲ್ಲದೇ ತಪ್ಪಿತಸ್ಥರನ್ನು ದಂಡಿಸಬೇಕು ಎಂದು ಆಗ್ರಹಿಸಿ ಮೂಡುಬಿದಿರೆ ಎಬಿವಿಪಿ ಘಟಕದ ಆಶ್ರಯದಲ್ಲಿ ಮೂಡಬಿದಿರೆ ಬಸ್‍ನಿಲ್ದಾಣದಲ್ಲಿ ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು.
ಎಬಿವಿಪಿ ವಿಭಾಗ ಸಹಸಂಚಾಲಕ ಶೀತಲ್ ಜೈನ್ ಮಾತನಾಡಿ, ಮಂಗಳೂರು ವಿವಿ ವತಿಯಿಂದ ಹಲವು ರೀತಿಯ ಅವ್ಯವಹಾರ ಹಾಗೂ ಭ್ರಷ್ಠಾಚಾರ ನಡೆದಿದೆ. ಕೇವಲ ಹತ್ತಿಪ್ಪತ್ತು ಮಂದಿ ವಿದೇಶೀ ವಿದ್ಯಾರ್ಥಿಗಳಿಗಾಗಿ ರೂ. 60 ಲಕ್ಷ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸುವಲ್ಲೂ ಭ್ರಷ್ಟಾಚಾರ ಮಾಡಿದೆ. ಭದ್ರತೆ, ಸ್ವಚ್ಛತೆ, ಡಿ ಗ್ರೂಪ್ ತಾತ್ಕಾಲಿಕ ಸಿಬಂದಿ ನೇಮಕಾತಿಯಲ್ಲಿ ಸ್ಥಳೀಯರಿಗೆ ವಂಚಿಸಲಾಗಿದೆ. ಸಿಸಿ ಕೆಮರಾ ಅಳವಡಿಕೆಯಲ್ಲಿ ಕೆಟಿಪಿಟಿ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಎಬಿವಿಪಿ ನಗರ ಸಹ ಕಾರ್ಯದರ್ಶಿ ನಿಶಿತ್ ಶೆಟ್ಟಿ, ನಾಗರಾಜ ಭಟ್ ಮೊದಲಾದವರು ಪ್ರತಿಭಟನೆಯಲ್ಲಿ ಮಾತನಾಡಿದರು. ನಂತರ ತಹಶೀಲ್ದಾರ್ ರಶ್ಮಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.


