ಬೆಂಗಳೂರು: ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕಲ ಪ್ರಯತ್ನ ಮಾಡುತ್ತಲೇ ಇದೆ. ಇಂತಹ ಯೋಜನೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ಹೊಸ ಯೋಜನೆಗೆ ಬುಧವಾರ ಚಾಲನೆ ನೀಡಿದೆ.

ಗ್ರಾಮೀಣ ಹಾಗೂ ಅರಣ್ಯ ಭಾಗದಲ್ಲಿರುವ ಬುಡಕಟ್ಟು ಜನಾಂಗದ ಜನರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಮನೆ ಬಾಗಿಲಿಗೆ ವೈದ್ಯಕೀಯ ಸೌಲಭ್ಯ ನೀಡುವ ವಿನೂತನ ಪ್ರಯತ್ನ ಮಾಡಿದೆ. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಈ ಯೋಜನೆಗಾಗಿ ತಲಾ ರೂ.50 ಲಕ್ಷ ವೆಚ್ಚದಲ್ಲಿ 16 ಸಂಚಾರಿ ಆರೋಗ್ಯ ವಾಹನಗಳನ್ನು ನೀಡಿದ್ದಾರೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಜೇನು ಕುರುಬ, ಕೊರಗ ಮತ್ತು ಅರಣ್ಯ ಅವಲಂಬಿತ ಬುಡಕಟ್ಟು ಜನಾಂಗದವರು ನೆಲೆಸಿದ್ದಾರೆ. ಪ್ರತಿ ಜಿಲ್ಲೆಗೆ ತಲಾ ಎರಡು ಸಂಚಾರಿ ಘಟಕಗಳು ಕಾರ್ಯ ನಿರ್ವಹಿಸಲಿದೆ.
ಇದರಲ್ಲಿ ಮೊದಲ ಹಂತದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕುಗಳು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲೂಕುಗಳು. ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ, ಹೆಗ್ಗಡ ದೇವನ ಕೋಟೆ ಮತ್ತು ಹುಣಸೂರು ತಾಲ್ಲೂಕುಗಳಲ್ಲಿ ಸಂಚಾರಿ ಆರೋಗ್ಯ ಘಟಕಗಳು ಇರಲಿದೆ.
ಇನ್ನು ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳು. ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಉಡುಪಿ ತಾಲೂಕು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ತರಿಕೆರೆ ತಾಲೂಕುಗಳು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕುಗಳಲ್ಲಿ ಇದ್ದು, ಉಳಿದ ಎಂಟು ಸಂಚಾರಿ ಘಟಕಗಳು ಕಾರ್ಯ ನಿರ್ವಹಿಸುತ್ತದೆ.
ಯೋಜನೆಯಂತೆ ಪ್ರತಿ ಸಂಚಾರಿ ಆರೋಗ್ಯ ಘಟಕದಲ್ಲಿ ವೈದ್ಯರು, ಶುಶ್ರೂಷಕರು, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಕಿರಿಯ ಆರೋಗ್ಯ ಸಹಾಯಕಿ ಹಾಗೂ ಚಾಲಕರನ್ನು ಒಳಗೊಂಡಿರುತ್ತದೆ. ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸ್ಥಳದಲ್ಲಿಯೇ ಔಷದೋಪಚಾರ ನೀಡಲಾಗುತ್ತದೆ. ಈ ಸಂಚಾರಿ ಘಟಕದಲ್ಲಿ ಜಿಪಿಎಸ್ ಹಾಗೂ ಡಿಜಿಟಲ್ ರೆಕಾರ್ಡ್ ಸಿಸ್ಟಮ್ ಒಳಗೊಂಡಿರುತ್ತದೆ.
