ಬಂಟ್ವಾಳ :ತುಳುನಾಡಿನ ಸರ್ವ ಆಚರಣೆಯ ಹಿಂದೆ ಸೌಹಾರ್ದತೆಯ ಸಂದೇಶವಿದೆ, ಆಹಾರ ಪದ್ಧತಿಯಲ್ಲಿ ವೈದ್ಯಕೀಯ ಅಂಶಗಳಿವೆ ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ದೈವರಾಧನೆಯ ಮಧ್ಯಸ್ಥ ಮನ್ಮಥ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ
.ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ “ಆಟಿಡೊಂಜಿ ಕೂಟ” ಕಾರ್ಯಕ್ರಮವನ್ನು ಮಧ್ಯಸ್ಥ ಮನ್ಮಥ ಶೆಟ್ಟಿ ಗುರುವಾರ ಉದ್ಘಾಟಿಸಿದರು.

aati balavikasa (2)

ದೈವಾರಾಧನೆಯಲ್ಲೂ ಸರ್ವ ಜಾತಿ ಮತದವರನ್ನು ಒಗ್ಗೂಡಿಸುವ ಆಶಯವಿದ್ದರೆ, ತುಳುನಾಡಿನ ಪಾಡ್ದನ, ಒಗಟುಗಳು ಒಗ್ಗಟ್ಟಿನ ಪಾಠಗಳನ್ನು ಒಳಗೊಂಡಿತ್ತು. ಸಂಬಂಧಗಳಿಗೆ ಬೆಲೆ ನೀಡುವ ಹಿರಿಮೆ ತುಳುನಾಡಿನಲ್ಲಿ ಮಾತ್ರ ಇದೆ, ಆದರೆ ಕೂಡುಕುಟುಂಬಗಳೆಲ್ಲಾ ಚದುರಿಹೋಗಿ ಇಂದು ವಿಭಕ್ತ ಕುಟುಂಬಗಳಾಗಿದೆ, ಇದರ ಜೊತೆಯಲ್ಲಿ ಹಿರಿಯರನ್ನು ಗೌರವಿಸುವ ಸಂಸ್ಕಾರಗಳನ್ನೂ ಮರೆಯುತ್ತಿದ್ದೇವೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಭೌಗೋಳಿಕ ಬದಲಾವಣೆಗಳು ತುಳುನಾಡಿನ ಸಂಸ್ಕೃತಿಯ ಮೇಲೆ ಗಾಢಪರಿಣಾಮ ಬೀರುತ್ತಿವೆ. ನಮ್ಮೊಳಗಿನ ಸಾಮರ್ಥ್ಯ ವನ್ನು ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬರಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಪ್ರಹ್ಲಾದ್ ಶೆಟ್ಟಿ ವಹಿಸಿ ಮಾತನಾಡಿ, ತುಳುನಾಡಿನ ವಿಶೇಷತೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ಮಾತನಾಡಿ, ಆಷಾಡ ತಿಂಗಳನ್ನು ವಿಭಿನ್ನವಾಗಿ ಆಚರಿಸುತ್ತಿದ್ದ ಹಿರಿಯರು, ಆ ಮೂಲಕ ಪ್ರಕೃತಿಗೆ ಗೌರವ ಸಲ್ಲಿಸುತ್ತಿದ್ದರು. ಮಾತ್ರವಲ್ಲ ಆಗ ಬಳಕೆ ಮಾಡುತ್ತಿದ್ದ ಒಂದೊಂದು ವಸ್ತುವೂ ತನ್ನದೇ ಆದ ಮೌಲ್ಯಗಳನ್ನು ಹೊಂದಿತ್ತು, ಅದನ್ನು ನಾವು ಅನುಕರಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಮಾತನಾಡಿ, ತುಳುನಾಡಿನ ಆಹಾರಗಳು ದೇಹಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸಿಕೊಡುತ್ತಿತ್ತು, ಆದರೆ ಈಗ ವಿಷಾಹಾರವೇ ಗತಿ ಎಂಬಂತಾಗಿದೆ ಎಂದು ಹೇಳಿದರು.

aati balavikasa (1)

ವಿದ್ಯಾರ್ಥಿ ವೃದ್ಧಿ ಕೊಂಡೆ, ಆತ್ಮಿಕಾ ಶೆಟ್ಟಿ ಆಟಿ ತಿಂಗಳ ವೈಶಿಷ್ಟ್ಯದ ಕುರಿತಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಪ್ರಥಮ್, ಅಮೃತಾ ಕೆ.ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ರಶ್ಮಿ ಫೆರ್ನಾಂಡಿಸ್ ಸಹಕರಿಸಿದರು. ಆಟಿಡೊಂಜಿ ಕೂಟ ಕಾರ್ಯಕ್ರಮದ ಅಂಗವಾಗಿ ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಬಳಿಕ ತುಳುನಾಡಿನ ಆಚಾರ ವಿಚಾರಗಳ ಕುರಿತು ಬೆಳಕುಚೆಲ್ಲುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರು.ಆಟಿಡೊಂಜಿ ಕೂಟದ ಅಂಗವಾಗಿ ವೇದಿಕೆಯನ್ನು ತುಳುನಾಡಿನ ಸಂಪ್ರದಾಯಗಳು ಮೇಳೈಸುವಂತೆ ಅಲಂಕರಿಸಲಾಗಿತ್ತು.
ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶಿಕ್ಷಕಿ ಲಕ್ಷ್ಮೀ, ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಕೆ.ನಾರಾಯಣ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಗ್ರೇಸ್ ಪಿ ಸಲ್ದಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲವಿಕಾಸ ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಭೂಮಿಕಾ ಸ್ವಾಗತಿಸಿ, ಶಾಲಾನಾಯಕ ವಿಜೇತ್.ಕೆ.ಎಂ. ವಂದಿಸಿದರು.

By suddi9

Leave a Reply

Your email address will not be published. Required fields are marked *