ಬಂಟ್ವಾಳ: ಮಂಗಳೂರಿನಲ್ಲಿ ವಿಶೇಷ ಮಕ್ಕಳಿಗಾಗಿ ರಾಷ್ಟ್ರೀಯ ಮಟ್ಟದ ಒಲಂಪಿಕ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು ಎಂದು ನಗರಾಭಿದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ಹಿದಾಯ ಫೌಂಡೇಶನ್ ಇದರ ಹಿದಾಯ ಶೇರ್ ಎಂಡ್ ಕೇರ್ ಕಾಲೊನಿಯ ವಿಶೇಷ ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಡವರ ಏಳಿಗೆಗೆ ಕಾರ್ಯ ನಿರ್ವಹಿಸುತ್ತಿರುವ ಹಿದಾಯ ಫೌಂಡೇಶನ್ ಮಾನವೀಯ ದಯೆ ತೋರುವ ಗುಣ ಹೊಂದಿದೆ ಎಂದರು.
ಹಿದಾಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ಮಹಮ್ಮದ್ ಹನೀಫ್, ಎಚ್.ಕೆ.ಖಾಸಿಂ ಅಹ್ಮದ್ ಮಾತನಾಡಿದರು. ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್, ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಭಾರತ್ ಇನ್ಫ್ರಾಟೆಕ್ ಸಂಸ್ಥೆ ಅಧ್ಯಕ್ಷ ಮುಸ್ತಾಫ ಎಸ್. ಎಂ., ವಿದೇಶೀ ಘಟಕಗಳ ಅಧ್ಯಕ್ಷರಾದ ಅಬ್ದುಲ್ ರಝಾಕ್, ಜಲೀಲ್, ಸಲೀಂ, ಅಹ್ಮದ್ ಬಾವ, ಇಲ್ಯಾಸ್, ಹಂಝದ್, ಝಕಾರಿಯ ಮತ್ತಿತರರು ಇದ್ದರು.
ಇದೇ ವೇಳೆ ಸಾಧಕ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಫೌಂಡೇಶನ್ ಕಾರ್ಯದರ್ಶಿ , ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.
ಫೌಂಡೇಶನ್ ಅಧ್ಯಕ್ಷ ಹನೀಫ್ ಕಲ್ಲಡ್ಕ ಸ್ವಾಗತಿಸಿ, ಝಮೀರ್ ಅಸ್ಗರ್ ವಂದಿಸಿದರು. ಕೆ.ಎಸ್. ಅಬೂಬಕ್ಕರ್ ಮತ್ತು ಹಮೀದ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
