ಬಂಟ್ವಾಳ: ಬಡಕಬೈಲು ನಿವಾಸಿ ಸಂತೋಷ್ ಯಾನೆ ಸಂತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನಾಲ್ಕನೇ ಹೆಚ್ಚುವರಿ ಮಂಗಳೂರು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 2009 ರಲ್ಲಿ ಬಂಟ್ವಾಳ ತಾಲೂಕಿನ ಬಡಕಬೈಲು ಎಂಬಲ್ಲಿ ಮೋರಿಯ ಮೇಲೆ ಕುಳಿತಿದ್ದ ಸಂತೋಷ್‍ನನ್ನು ಬೆಳಗ್ಗೆ ಸುಮಾರು ಹತ್ತು ಗಂಟೆಯ ಸಮಯದಲ್ಲಿ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್‍ನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 22 ಆರೋಪಿಗಳು ಇದ್ದು, ಅದರಲ್ಲಿ ಪ್ರಮುಖ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಬಂದರು ನಿವಾಸಿ ಇಕ್ಬಾಲ್ ಹಾಗೂ ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಫಾರೂಕ್ ಅವರಿಗೆ ಶಿಕ್ಷೆ ನೀಡುವಂತೆ ಆದೇಶ ಹೊರಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ನಾಲ್ಕು ಜನ ಆರೋಪಿಗಳು ಮೃತಪಟ್ಟಿದ್ದಾರೆ. ಮೃತಪಟ್ಟ ಆರೋಪಿಗಳಲ್ಲಿ ಮಾಡೂರು ಇಸುಬು ಜೈಲಿನಲ್ಲಿ ಕೊಲೆಯಾದರೆ, ಮಾಡೂರು ಇಸ್ಮಾಯಿಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕುಕ್ಕುಂದೂರು ನಿವಾಸಿ ಸುಲೈಮಾನ್ ಯಾನೆ ಖಾದರ್ ಕಾರ್ಕಳದಲ್ಲಿ ಕೊಲೆಯಾದರೆ, ವಾಮಂಜೂರು ನಿವಾಸಿ ಮಹಮ್ಮದ್ ಕಬೀರ್ ವಾಮಂಜೂರಿನಲ್ಲಿ ಕೊಲೆಯಾಗಿದ್ದಾರೆ. ಇನ್ನು ಉಳಿದ ಆರೋಪಿಗಳಾದ ಇಕಾಸ್ ಬಂಟ್ವಾಳ, ಅಬ್ಬಾಸ್ ಬಂಟ್ವಾಳ, ಹಮೀದ್ ಈ ಮೂರು ಜನ ತಲೆಮರೆಸಿಕೊಂಡಿದ್ದಾರೆ.
ಆಗಿನ ಸಿ.ಐ ನಂಜುಂಡೇ ಗೌಡ ಅವರು ತನಿಖೆ ನಡೆಸಿ ದೋಷಾರೋಪಣೆಯಿಂದಾಗಿ ಪಟ್ಟಿ ಸಲ್ಲಿಸಿದ್ದರು. ನಂತರ ಈ ಪ್ರಕರಣವನ್ನು ಸರಕಾರಿ ಅಭಿಯೋಜಕ ಹರಿಚ್ಚಂದ್ರ ಉದಯವಾರ್ ಸರಕಾರದ ಪರ ವಾದಿಸಿದ್ದರು. ಪ್ರಸ್ತುತ ಬಂಟ್ವಾಳದ ಸಿ.ಐ ಟಿ.ಡಿ ನಾಗರಾಜ್ ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
