gur-june-16-umanath kotian

ವಾಮಂಜೂರು: ಪಿಲಿಕುಳದಲ್ಲಿ ಪಿಲಿಕುಳ ನಿಸರ್ಗಧಾಮ ಹಾಗೂ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ `ಹಣ್ಣುಗಳ ಸಂತೆ-2018′ ಪ್ರದರ್ಶನ ಮತ್ತು ಮಾರಾಟವನ್ನು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ನಾನು ಊಟವಿಲ್ಲದೆ ಹಲಸು ತಿಂದು ಶಾಲೆಗೆ ಹೋದದ್ದುಂಟು. ಈಗ ನಮ್ಮೆದುರೇ ಸ್ಥಳೀಯ ಮಾವು, ಹಲಸು ಕೊಳೆತು ಹೋಗುತ್ತಿದೆ. ಇದೇ ಮಾವು ಅಥವಾ ಇತರ ಹಣ್ಣುಗಳಿಗೆ ಬಣ್ಣ ಕೊಟ್ಟು ಮಾರುಕಟ್ಟೆಗೆ ತಂದಾಗ ಜನ ಖರೀದಿಗೆ ಮುಗಿ ಬೀಳುತ್ತಾರೆ. ಇಂತಹ ಪ್ರದರ್ಶನ, ಸಂತೆಗಳಿಗೆ ಉತ್ತೇಜನ ನೀಡಿ, ಸ್ಥಳೀಯರನ್ನು ಪ್ರೋತ್ಸಾಹಿಸಿದಾಗ ಮಾತ್ರ ಈ ಸಂತೆ ಯಶಸ್ವಿಯಾಗುತ್ತವೆ ಎಂದು ಹೇಳಿದರು.

gur-june-16-ivan

ಎಂಎಲ್‍ಸಿ ಐವನ್ ಡಿ’ಸೋಜ ಮಾತನಾಡಿ, ಮಾವು ಮತ್ತು ಹಲಸು ಕಾಡಿನ ಬೆಳೆ. ಇವುಗಳಿಗೆ ಜನರ ಪೋಷಣೆ ಅಗತ್ಯವಿಲ್ಲ. ಆದರೂ ಇದು ಪ್ರಮುಖ ಬೆಳೆಯಾಗಿದೆ. ಹಿಂದೆ ಊರಿನ ಹೋಟೆಲುಗಳಲ್ಲಿ ಲಭ್ಯವಿದ್ದ ಹಲಸಿನ ಗಟ್ಟಿ, ಈಗ ಪಂಚತಾರಾ ಹೋಟೆಲುಗಳಲ್ಲಿ ಸಿಗುತ್ತಿದೆ ಎಂದವರು, ಎಲ್ಲ ತರಕಾರಿ/ಹಣ್ಣುಗಳಲ್ಲಿ ಸಾಕಷ್ಟು ಸಂಶೋಧನೆ ನಡೆದಿದ್ದರೂ ಹಲಸಿನ ಹಣ್ಣಿನಲ್ಲಿ ಹೇಳಿಕೊಳ್ಳುವ ಸಂಶೋಧನೆ ನಡೆದಿಲ್ಲ. ಈ ಕೊರತೆ ನೀಗಿಸಲು ನಮ್ಮ ಸಂಶೋಧಕರು ಮನಸ್ಸು ಮಾಡಬೇಕು ಎಂದರು.

ದ.ಕ. ಜಿಲ್ಲಾ ಘಟಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಹಲಸು ಶಕ್ತಿಶಾಲಿ ಹಣ್ಣು. ಆದರೆ, ಸ್ಥಳೀಯವಾಗಿ ಲಭ್ಯವಾಗುವ ಈ ಹಣ್ಣು ತಿನ್ನಲು ನಾವು ಮುಜುಗರ ಪಡುತ್ತಿದ್ದೇವೆ. ಸಂಸ್ಕರಿಸಲಾದ ಇದೇ ಹಣ್ಣು ಮಾಲುಗಳಲ್ಲಿ ಸಿಕ್ಕರೆ ಎಷ್ಟು ಹಣ ಕೊಟ್ಟಾದರೂ ಖರೀದಿಸುತ್ತೇವೆ. ನಮ್ಮೂರ ಮಾವು-ಹಲಸಿನ ತಳಿ ಉಳಿಸಿದರೆ ನಮ್ಮ ಸಂತತಿಯೂ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ತೋಟಗಾರಿಕೆ ಇಲಾಖೆ ಅಧಿಕಾರಿ ಎಸ್ .ಆರ್. ನಾಯಕ್ ಮಾತಾನಾಡಿ, ನಮ್ಮ ಹಣ್ಣುಗಳಿಗೆ ಮಾರುಕಟ್ಟೆ ಸಿಗದೆ ರೈತರು ಕಂಗಾಲಾಗಿದ್ದರೆ, ಹಣ್ಣುಗಳು ಕೊಳೆಯುತ್ತಿವೆ. ಬೆಳೆಗಾರರಿಗೆ ಪ್ರೋತ್ಸಾಹದ ಅಗತ್ಯವಿದ್ದು, ಹಣ್ಣುಗಳ ಸಂಸ್ಕರಣೆ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಹೆಚ್ಚು ಸಂಸ್ಕರಣಾ ಘಟಕ ಸ್ಥಾಪಿಸಲಿದ್ದು, ಇಂತಹ ಮೇಳ ಅಥವಾ ಸಂತೆಗಳಿಗೆ ಉತ್ತೇಜನ ನೀಡುತ್ತಿದೆ ಎಂದರು.

 

ಈ ಸಂದರ್ಭದಲ್ಲಿ ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್, ಪಿಲಿಕುಳ ಕಾರ್ಯನಿರ್ವಹಣಾಧಿಕಾರಿ ವಿ ಪ್ರಸನ್ನ, ತಾಪಂ ಸದಸ್ಯೆ ಕವಿತಾ, ಗ್ರಾಪಂ ಸದಸ್ಯರಾದ ಪೂರ್ಣಿಮಾ, ಮಮತಾ ಶೆಟ್ಟಿ, ವಸಂತಿ ಮತ್ತಿತರಿದ್ದರು.

ಗ್ಯಾಕ್ ಹಣ್ಣು: ಇದು ಮೂಡಬಿದ್ರಿಯಲ್ಲಿ ಬೆಳೆಯಲಾದ ಗ್ಯಾಕ್ ಹಣ್ಣು. ಕ್ಯಾನ್ಸರ್ ರೋಗ ನಿವಾರಕ ಹಣ್ಣು ಎಂದು ಅಧ್ಯಯನದಿಂದ ಸಾಬೀತಾದ ಬಳಿಕ ಈ ಹಣ್ಣಿಗೆ ಎಲ್ಲೆಡೆ ಬೇಡಿಕೆ ಬಂದಿದೆ. ಮೂಡಬಿದ್ರೆಯ ಕಸ್ತೂರಿ ಫಾರ್ಮಿನ ರವಿ ಮತ್ತು ಹರ್ಷಿತ್ ಎಂಬವರು ಪಿಲಿಕುಳ ಹಣ್ಣುಗಳ ಸಂತೆಗೆ ಈ ಅಪೂರ್ವ ಹಣ್ಣು ತಂದಿದ್ದಾರೆ. ಮೂಲತಃ ಈ ಹಣ್ಣು ಆಗ್ನೇಯ ಏಷ್ಯಾದ ದಕ್ಷಿಣ ಚೀನಾದಿಂದ ಈಶಾನ್ಯ ಆಸ್ಟ್ರೇಲಿಯಾದಲ್ಲಿ ಬೆಳೆಯಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಇದು ವಲಸೆ ಬೆಳೆಯಾಗಿದೆ. ಈ ಫಾರ್ಮಿನಲ್ಲಿ ಅನಾನಸು, ರಂಬುಟನ್ ಹಣ್ಣು ಬೆಳೆಯಲಾಗುತ್ತದೆ ಎಂದು ರವಿ ಹೇಳಿದರು.

 

ಹಲಸಿನ ಗಟ್ಟಿ/ಚಿಪ್ಸ್: ಕಾರ್ಕಳದ ಸಂತೋಷ್ ಭಂಡಾರ್ಕರ್ ಸ್ಟಾಲಿನಲ್ಲಿ ಹಲಸಿನ `ಗಟ್ಟಿ’ ಗಮನಸೆಳೆದರೆ, ಉಳಿದ ಐದಾರು ಮಳಿಗೆಯಲ್ಲಿ ಹಲಸು, `ಉಪ್ಪಡಚ್ಚಿರ್'(ನೀರಿನಲ್ಲಿ ಹಾಕಿದ ಹಲಸಿನ ಹೋಳು) ಹಾಗೂ ಹಲಸಿನಿಂದ ತಯಾರಿಸಲಾದ ವಿವಿಧ ಬಗೆಯ ಚಿಪ್ಸ್ ಮಾರಾಟಕ್ಕಿಡಲಾಗಿದೆ. ಐದಾರು ಮಳಿಗೆಯಲ್ಲಿ ಸ್ಥಳೀಯ ವಿವಿಧ ತಳಿಯ ಹಲಸು ಪ್ರದರ್ಶನ-ಮಾರಾಟಕ್ಕಿಡಲಾಗಿದ್ದು, ಸಂತೆಯ ಉದ್ದಗಲಕ್ಕೂ ಹಲಸಿನ ವಾಸನೆ ಮೂಗಿಗೆ ಬಡಿಯುವಂತಿತ್ತು.

 

ಮಾವಿನೊಂದಿಗೆ `ತೇವು’ : ಇನ್ನೊಂದೆಡೆ ಮಾವು ಮತ್ತು ಮಾವಿನ ಉತ್ಪನ್ನಗಳಾದ ಉಪ್ಪಿನಕಾಯಿ, ನೀರುಪ್ಪಡ್(ನೀರಿನಲ್ಲಿ ಹಾಕಿದ ಮಿಡಿ ಮಾವು), ಅಂಬಟೆಕಾಯಿ, ತೇವು(ಕೆಸು) ತರಕಾರಿ, ಚಟ್ನಿಗೆ ಬಳಸುವ ಹೆಬ್ಬಲಸು, ಉಪ್ಪು ನೀರಲ್ಲಿ ಹಾಕಿದ ಕರಂಡೆ ಕಾಯಿ, ಬೆಂಡಿಕಾಯಿ-ಬೆಂಡಿ ಬೀಜ, ಇತರ ತರಕಾರಿ ಬೀಜಗಳು, ಪೇರಳೆಹಣ್ಣು, ಪಪ್ಪಾಯ, ಅನಾನಸು, ಬಾಳೆಹಣ್ಣು ನೋಡುಗರ ಬಾಯಲ್ಲಿ ನೀರೂರಿಸುವಂತಿತ್ತು. ಮತ್ತೆ ಕೆಲವು ಮಳಿಗೆಗಳಲ್ಲಿ ಹಣ್ಣು ಮತ್ತು ತರಕಾರಿಗಳ ಖಾದ್ಯ ಸೊತ್ತುಗಳು, ಸಸಿಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.

gur-june-16-gac frut

gur-june-hebbalasu-kukku

gur-june-16-exibition gate-1 (1)

gur-june-16-exibition gate-4

By suddi9

Leave a Reply

Your email address will not be published. Required fields are marked *