ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಬಿರುಸುಗೊಂಡಿರುವಂತೆಯೇ ಕಡಲ ನಗರಿಯಾದ ಮಂಗಳೂರಿನಲ್ಲಿ ಕಡಲುಗಳು ಪ್ರಕ್ಷುಬ್ಧಗೊಳ್ಳಲಾರಂಭಿಸಿದೆ. ಉಳ್ಳಾಲ, ಸೋಮೇಶ್ವರದ ಕಡಲ ಕಿನಾರೆಯಲ್ಲಿ ಭಾರೀ ಗಾತ್ರದ ಕಡಲ ಅಲೆಗಳು ತಡೆಗೋಡೆಯಾಗಿ ಹಾಕಲ್ಪಟ್ಟಿರುವ ಬೃಹತ್ ಗಾತ್ರದ ಕಲ್ಲುಗಳನ್ನು ಅಪ್ಪಳಿಸಿ ಸಮೀಪದ ಮನೆಗಳತ್ತ ನುಗ್ಗಲಾರಂಭಿಸಿವೆ.
ಈ ನಡುವೆಯೇ ಉಳ್ಳಾಲದ ಕೈಕೋ, ಕೋಟೆಪುರ ಪ್ರದೇಶಗಳಲ್ಲಿ ಮನೆಗಳ ಸಮೀಪ ಕಡಲ ತಡಿಗೆ ಬೃಹತ್ ಗಾತ್ರದ ಕಲ್ಲುಗಳನ್ನು ಜೆಸಿಬಿ, ಹಿತಾಚಿ, ಕ್ರೇನ್ ಮೂಲಕ ಹಾಕುವ ಕಾರ್ಯವೂ ಮುಂದುವರಿದಿದೆ. ಕಳೆದ ಬಾರಿ (ಜೂ. ೭ರಂದು) ಭಾರೀ ಕಡಲ್ಕೊರೆತದಿಂದಾಗಿ ಕೈಕೋ ಇಂದಿರಾ ನಗರದ ನೆಫಿಸಾ ಎಂಬವರ ಮನೆ ಭಾಗಶ: ಸಮುದ್ರದ ನೀರು ಪಾಲಾಗಿತ್ತು. ಇದೀಗ ಜಾಗದಲ್ಲಿ ಮತ್ತೆ ಹೊಸ ಮನೆ ನಿರ್ಮಾಣವಾಗಿದೆ.
ತಡೆಗೋಡೆಯಾದರೂ ಅಪಾಯ ತಪ್ಪಿದ್ದಲ್ಲ: ಉಳ್ಳಾಲದ ಕೈಕೋ ಪ್ರದೇಶದುದ್ದಕ್ಕೂ ಮನೆಗಳಿರುವ ಕಡೆ ಕಡಲ ಕಿನಾರೆಗೆ ಬೃಹತ್ ಗಾತ್ರದ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಹಾಗಾಗಿ ಈ ಬಾರಿ ಸದ್ಯಕ್ಕೆ ಸ್ಥಳೀಯರು ಕೊಂಚ ನಿರಾಳವಾಗುವಂತಾಗಿದೆ. ಹಾಗಿದ್ದರೂ ಕಡಲೆಗಳು ಕಲ್ಲಿನ ತಡೆಗೋಡೆಯನ್ನು ಏರಿ ಮನೆಗಳತ್ತ ಅಪ್ಪಳಿಸುತ್ತಿವೆ. ಮಳೆ ಇನ್ನಷ್ಟು ಬಿರುಸುಗೊಂಡಾಗ ಕಡಲು ಇನ್ನಷ್ಟು ಪ್ರಕ್ಷುಬ್ಧವಾದಾಗ ಇಲ್ಲಿ ಅಪಾಯ ಸಂಭವಿಸುವುದನ್ನು ಅಲ್ಲಗಳೆಯಲಾಗದು. ಇದೇ ರೀತಿಯಲ್ಲಿ ಕೋಟೆಪುರದಲ್ಲಿ ಬೃಹತ್ ಗಾತ್ರದ ಕಲ್ಲುಗಳನ್ನು ಹಾಕುವ ಕಾರ್ಯ ಇಂದು ಕೂಡಾ ಮುಂದುವರಿದಿದೆ. ಸಮುದ್ರ ಕಿನಾರೆಯುದ್ದಕ್ಕೂ ಬಿರುಗಾಳಿ ತೀವ್ರಗೊಂಡಿದ್ದು, ಭೋರ್ಗರೆಯುವ ಬೃಹತ್ ಅಲೆಗಳು ಸಮುದ್ರ ದಡವನ್ನು ಅಪ್ಪಳಿಸಿ ಸಾಗುತ್ತಿವೆ. ಕಡಲ ಕಿನಾರೆಯಲ್ಲಿ ಅಲೆಗಳ ಅಬ್ಬರ ರುದ್ರ ಮನೋಹರವಾಗಿದೆ. ಇದೇ ವೇಳೆ ಕೋಟೆಪುರ ಹಾಗೂ ಕೈಕೋ ಪ್ರದೇಶಗಳಲ್ಲಿ ಹಾಕಲಾಗಿರುವ ತಡೆಗೋಡೆಗಳನ್ನು ಅಪ್ಪಳಿಸಿ ಮುನ್ನುಗ್ಗುತ್ತಿರುವ ಕಡಲ ನೀರಿನ ಅಲೆಗು ಮನೆಗಳಿಗೆ ಅಪ್ಪಳಿಸಲಾರಂಭಿಸಿದೆ.
ಕೆಲ ದಿನಗಳಿಂದೀಚೆಗೆ ಸಮುದ್ರ ತೀವ್ರವಾಗಿ ಪ್ರಕ್ಷುಬ್ಧಗೊಂಡಿದ್ದು, ಸಮುದ್ರ ನೀರು ಕಲ್ಲಿಗೆ ಅಪ್ಪಳಿಸಿ ಮೇಲೆರಿ ಮನೆಗಳತ್ತ ಚಿಮ್ಮುತ್ತಿದೆ. ಕಲ್ಲು ಹಾಕಿ ತಡೆಗೋಡೆಯನ್ನೇನೋ ನಿರ್ಮಿಸಲಾಗಿದೆ. ಆದರೆ ಯಾವುದೇ ಸಂದರ್ಭದಲ್ಲಿ ಅಪಾಯವನ್ನು ಮಾತ್ರ ಊಹಿಸಲು ಸಾಧ್ಯವಿಲ್ಲ” ಎಂದು ಸ್ಥಳೀಯ ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾನು ಈ ಕುಟುಂಬ ಸಮೇತ ಈ ಪ್ರದೇಶಕ್ಕೆ ಬಂದು ಸುಮಾರು ೨೭ ವರ್ಷಗಳಾಗಿವೆ. ಇಲ್ಲೇ ಚರುಮುರಿ ಅಂಗಡಿಯನ್ನು ನಡೆಸುತ್ತಿದ್ದೇನೆ. ನಾನು ಇಲ್ಲಿಗೆ ಬಂದ ಆರಂಭದಲ್ಲಿ ಬಂಡೆ ಕಲ್ಲುಗಳನ್ನು ಅಟ್ಟಿಯಾಗಿಟ್ಟು ಸಮುದ್ರಕ್ಕೆ ಹಾಕಲಾಗುತ್ತಿತ್ತು. ಬಳಿಕ ಕಬ್ಬಿಣದ ಬಲೆಗಳಲ್ಲಿ ಕಲ್ಲುಗಳನ್ನು ಹಾಕಿ ಕಡಲಿಗೆ ಹಾಕಲಾಗುತ್ತಿತ್ತು. ಆ ಕಬ್ಬಿಣದ ಬಲೆ ಸಮುದ್ರ ದಡ ಸೇರಿ ಅದನ್ನು ಗುಜುರಿಗೆ ಮಾರುವ ಪ್ರಸಂಗವೂ ಇಲ್ಲಿ ನಡೆಯುತ್ತಿತ್ತು. ಅದಾಗಿ ಬೃಹತ್ತಾದ ಚೀಲಗಳಲ್ಲಿ ಮರಳನ್ನು ತುಂಬಿಸಿ ಅದನ್ನು ತಡೆಗೋಡೆಯಾಗಿ ನಿರ್ಮಿಸಲಾಯಿತು. ಬಳಿಕ ಉಳ್ಳಾಲದ ಸಮುದ್ರದುದ್ದಕ್ಕೂ ಬ್ರೇಕ್ ವಾಟರ್ ನಿರ್ಮಾಣವಾಯಿತು. ಬಳಿಕ ಮತ್ತೆ ಇದೀಗ ಬೃಹತ್ ಕಲ್ಲಿನ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಈ ಬಾರಿ ಕೋಟೆಪುರ, ಕೈಕೋ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ಬಿರುಸು ಕೊಂಚ ಕಡಿಮೆಯಾದಂತೆ ಕಾಣಿಸುತ್ತಿದೆ. ಆದರೆ ಸೋಮೇಶ್ವರ ಪ್ರದೇಶದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಬಾರಿ ಸೋಮೇಶ್ವರದ ಸ್ಮಶಾನಕ್ಕೆ ಅಪಾಯವಿರುವಂತೆ ಗೋಚರವಾಗುತ್ತಿದೆ” ಎಂದು ಸಮ್ಮರ್ ಸ್ಯಾಂಡ್ ಬೀಚ್ ಬಳಿಯಲ್ಲಿ ಚರುಮುರಿ ಅಂಗಡಿಯನ್ನು ನಡೆಸುತ್ತಿರುವವರೊಬ್ಬರು ಮಾಧ್ಯಮದ ಬಳಿ ಅಭಿಪ್ರಾಯ ಹಂಚಿಕೊಂಡರು.
ನೂತನ ಸಚಿವ ಖಾದರ್ ಭೇಟಿ: ರಾಜ್ಯದ ನಗರಾಭಿವೃದ್ಧಿ ಮತ್ತು ವಸತಿ ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ತವರು ಜಿಲ್ಲೆಗೆ ಭೇಟಿ ನೀಡಿದ ಯು.ಟಿ.ಖಾದರ್ ನಿನ್ನೆ ಸಂಜೆ ಕಡಲ್ಕೊರೆತಕ್ಕೀಡಾದ ಉಳ್ಳಾಲದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸ್ಥಳೀಯರು ಕಡಲ್ಕೊರೆತ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗ್ರಹಿಸಿದರು. ಕಳೆದ ಎರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಗಾಳಿ, ಮಳೆಯ ಮಧ್ಯೆ ಉಳ್ಳಾಲದ ಕಡಲ ಆರ್ಭಟ ಹೆಚ್ಚಿದ್ದು, ಕಡಲ ತೀರದ ಜನರು ಆತಂಕಿತರಾಗಿದ್ದಾರೆ.

