ಮಂಗಳೂರು: ನಕಲಿ ಚಿನ್ನಾಭರಣವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಮೂಲದ ಪ್ರವೀಣ್ ವೀರಾ ರಾತೋಡ್ (21) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ: ಬಂಧಿತ ಆರೋಪಿ ಜೂ.5ರಂದು ತೊಕ್ಕೊಟು ಹರಿಪ್ರಸಾದ್ ಕಾಂಪ್ಲೆಕ್ಸ್ನಲ್ಲಿರುವ ಎಸ್.ಮೈ.ಶಾಪ್ ಫ್ಯಾನ್ಸಿ ಅಂಗಡಿಯ ಮಾಲಕ ಲೋಕೇಶ್ ಕುಮಾರ್ ಎಂಬವರ ಮಳಿಗೆಗೆ ಬಂದು ನಕಲಿ ಚಿನ್ನದ ಆಭರಣಗಳನ್ನು ಅಸಲಿಯ ಚಿನ್ನದ ಆಭರಣಗಳೆಂದು ಹಾಗೂ ಸುಮಾರು 30 ಲಕ್ಷದ ಚಿನ್ನಾಭರಣವನ್ನು ಕೇವಲ 3 ಲಕ್ಷ ಹಣಕ್ಕೆ ಮಾರಾಟ ಮಾಡಲು ಪ್ರಯತ್ನಿಸಿದ್ದ. ಈ ವೇಳೆ ಸಂಶಯಗೊಂಡ ಅಂಗಡಿ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಉಳ್ಳಾಲ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕ ಕೆ.ಆರ್.ಗೋಪಿಕೃಷ್ಣ, ಪೊಲೀಸ್ ಉಪ-ನಿರೀಕ್ಷಕ ವಿನಾಯಕ ತೋರಗಲ್ ಮತ್ತು ಸಿಬ್ಬಂದಿಯಾದ ಪ್ರಶಾಂತ, ಲಿಂಗರಾಜು, ಚಿದಾನಂದ ಭಾಗವಹಿಸಿದ್ದರು.

