ಮಂಗಳೂರು: ಹಿರಿಯರ ಮೂಲಕ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಪೇಜಾವರ ಶ್ರೀಗಳಿಗೆ ಮಾಹಿತಿ ಒದಗಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಪೇಜಾವರ ಶ್ರೀಗಳು ಮಾಧ್ಯಮಗಳಿಂದ ಎಷ್ಟು ತಿಳಿದುಕೊಂಡಿದ್ದಾರೆ. ಕಾರ್ಯಕರ್ತರಿಂದ ಅವರಿಗೆ ಎಷ್ಟು ಮಾಹಿತಿ ಇದೆ ಎಂದು ತಿಳಿದಿಲ್ಲ. ಪೇಜಾವರ ಶ್ರೀ ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಗ್ರಾದಿಂದ ಹಿಡಿದು ದೇಶದ ವಿವಿಧ ಭಾಗಗಳಿಂದ ಗಂಗೆಯನ್ನು ಸೇರುವ ತ್ಯಾಜ್ಯವನ್ನು ಶುದ್ಧಗೊಳಿಸುವುದು ಸುಲಭದ ಕೆಲಸವಲ್ಲ. ಹಾಗಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಗಂಗೆಯನ್ನು ನೋಡಿದವರಿಗೆ ಹಿಂದೆ ಹೇಗಿತ್ತು ಮತ್ತು ಈಗ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ಶ್ರೀಗಳಿಗೆ ಪರೋಕ್ಷ ಟಾಂಗ್ ನೀಡಿದರು.
ಮೋದಿ ಸರಕಾರ ಗಾಂಧೀಜಿಯವರ ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸಿದೆ. ಆದ್ದರಿಂದಾಗಿ 3.5 ಲಕ್ಷ ಗ್ರಾಮಗಳು ಬಯಲು ಶೌಚಮುಕ್ತವಾಗಿವೆ. 7.80 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಿದೆ. 20 ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, 497 ಡಯಾಲಿಸಿಸ್ ಕೇಂದ್ರಗಲು, ವಿದ್ಯುದ್ದೀಕರಣ ಯೋಜನೆಯಿಂದ 18500 ಹಳ್ಳಿಗಳು ಹೊಸತಾಗಿ ವಿದ್ಯುತ್ ಪಡೆದುಕೊಂಡಿವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬ್ರಿಜೇಶ್ ಚೌಟ, ಕಿಶೋರ್ ರೈ, ಪ್ರಭಾಮಾಲಿನಿ, ಕರುಣಾಕರ್, ಪ್ರತಾಪ್ ಸಿಂಹ ನಾಯಕ್, ರವಿಚಂದ್ರ, ಪ್ರೇಮಾನಂದ ಶೆಟ್ಟಿ, ಭಾಸ್ಕರ ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

