ಪುತ್ತೂರು: ಜಿಲ್ಲೆಯಲ್ಲಿ ಕಳೆದ ದಿನಗಳಿಂದ ವಿಪರೀತ ಮಳೆಯ ಅಬ್ಬರ ಕಾಣುತ್ತಿದೆ. ಮುಂಗಾರು ಮಳೆ ಆರಂಭವಾಗುವ ಪೂರ್ಣ ಲಕ್ಷಣಗಳು ಕಂಡು ಬರುತ್ತಿದೆ. ಆರಂಭಿಕ ಮಳೆ ಗಾಳಿಗೆ ಜನತೆ ತತ್ತರಿಸಿಹೋಗಿದ್ದಾರೆ. ಆದರೆ ಜನತೆಯ ಸಾರಿಗೆಯಾಗಿರುವ ಕೆಎಸ್ಸಾರ್ಟಿಸಿ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡ ಹಾಗೇ ಕಾಣುತ್ತಿಲ್ಲ. ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ಬಹುತೇಕ ಬಸ್ಸುಗಳು ಪ್ರಯಾಣಿಕರಿಗೆ ಆತಂಕ ಉಂಟು ಮಾಡುತ್ತಿದ್ದು, ಇಲ್ಲಿನ ಬಹುತೇಕ ಬಸ್‌ಗಳಲ್ಲಿ ಕೊಡೆ ಹಿಡಿದುಕೊಂಡೇ ಪ್ರಯಾಣ ಮಾಡಬೇಕಾದ ಸ್ಥಿತಿ ಉಂಟಾಗಿದೆ.
ಆರಂಭಿಕ ಮಳೆಗೆ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿರುವ ಬಸ್ಸುಗಳು ಸೋರಲಾರಂಭಿಸಿವೆ. ಮಳೆಯ ನೀರಲ್ಲಾ ಬಸ್ಸಿನ ಒಳಗೆ ಬೀಳುತ್ತಿದೆ. ಈ ಬಸ್‌ಗಳಲ್ಲಿ ಸೀಟಿನಲ್ಲಿ ಕುಳಿತು ಪ್ರಯಾಣಿಸುವುದಲ್ಲ ನಿಂತು ಪ್ರಯಾಣಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ‘ಸುಖಃಕರ ಪ್ರಯಾಣ’ ಬದಲಿಗೆ ‘ಸ್ನಾನ ಕ್ಕಾಗಿ ಬಸ್ ಪ್ರಯಾಣ’ ಎನ್ನುವ ಘೋಷಣೆಗೆ ಅನುರೂಪವಾಗಿ ಕೆಎಸ್ಸಾರ್ಟಿಸಿ ಬಸ್‌ಗಳು ಬದಲಾಗಿವೆ.
ಮಳೆಯ ಸಂದರ್ಭದಲ್ಲಿ ಬಸ್ಸುಗಳು ಸೋರುತ್ತಿರುವುದು ಕೆಎಸ್ಸಾರ್ಟಿಸಿ ಇಲಾಖೆಯ ಚಾಲಕ -ನಿರ್ವಾಹಕರನ್ನು ಪ್ರಯಾಣಿಕರು ತರಾಟೆಗೆತ್ತಿಕೊಂಡಿರುವ ಘಟನೆಗಳೂ ನಡೆಯುತ್ತಿವೆ. ಎಡಬಿಡದೆ ಮಳೆ ಸುರಿಯುವ ಮಳೆಗಾಲದ ದಿನ ಸಮೀಪಿಸುತ್ತಿದೆ. ಆದರೂ ಕೆಎಸ್ಸಾರ್ಟಿಸಿ ಇಲಾಖೆಯ ಅಧಿಕಾರಿಗಳು ಬಸ್ ಸೋರಿಕೆ ತಡೆಯುವ ಕಾಯಕಕ್ಕೆ ಯಾವುದೇ ಬಗೆಯಲ್ಲೂ ಮುಂದಾಗದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಗುತ್ತಿದೆ.
ಕನಿಷ್ಠ ಪಕ್ಷ ಸೋರುವ ಬಸ್ಸಿನ ಮಾಡಿಗೆ ಟರ್ಪಾಲ್ ಅಳವಡಿಸುವುದಕ್ಕೂ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲ. ಗಾಜು ಹೊಡೆದು ಹೋಗಿರುವ ಬಸ್ಸಿನ ಕಿಟಿಕಿಗಳಿಗೆ ಹೊಸ ಗಾಜುಗಳನ್ನು ಅಳವಡಿಸುವ ಗೋಜಿಗೆ ಹೋಗಿಲ್ಲ. ಕಿಟಿಕಿ ಬಾಗಿಲಿನ ಮೂಲಕ ನೀರು ಬಸ್ಸಿನೊಳಗೆ ಬಾರದಂತೆ ರಬ್ಬರ್ ಬೀಡಿಂಗ್ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ನಡೆದಿಲ್ಲ ಎಂಬುವುದು ಸ್ಪಷ್ಟವಾಗಿದ್ದು, ಶಾಲಾ ಕಾಲೇಜುಗಳು ಆರಂಭಗೊಂಡಿದೆ. ಇನ್ನು ಯಾವಾಗ ಸಮಸ್ಯೆಯನ್ನು ಸರಿಪಡಿಸುವುದು ಎಂಬುವುದು ಕೆಸ್ಸಾರ್ಟಿಸಿ ಅಧಿಕಾರಿಗಳಿಗೆ ಪ್ರಯಾಣಿಕರ ಪ್ರಶ್ನೆ.

