11cnr4

ಶ್ರೀನಿವಾಸಪುರ: ಹಣ್ಣುಗಳ ರಾಜ ಮಾವಿನ ಹಣ್ಣು ಒಂದು ವರ್ಷ ಉತ್ತಮ ಬೆಳೆ ಬಂದರೆ ಮಾರನೇ ವರ್ಷ ಕಡಿಮೆ ಬೆಳೆ ಬರುವುದು. ಆದರೆ ಕರ್ನಾಟಕದಲ್ಲಿ ಈ ಎರಡು ವರ್ಷದಲ್ಲಿ ಬೆಳೆ ಕಡಿಮೆ ಆಗಿದೆ.

ಪಟ್ಟಣದ ಹೊರವಲಯದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾವಿನ ಕಾಯಿ ವಹಿವಾಟು ಆರಂಭವಾಗಿದ್ದು, ಆದರೆ ನಿರೀಕ್ಷಿತ ಬೆಲೆ ಮಾತ್ರ ಬಂದಿಲ್ಲ. ಇಲ್ಲಿನ ಮಾವಿನ ಕಾಯಿ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡದು. ಈಗಷ್ಟೇ ರೈತರು ಕೆಲವು ತಳಿಯ ಮಾವಿನ ಕಾಯಿ ಕಿತ್ತು ತಂದು ಮಂಡಿಗೆ ಹಾಕುತ್ತಿದ್ದಾರೆ. ವಾತಾವರಣ ವೈಪರೀತ್ಯದಿಂದಾಗಿ ಈ ಬಾರಿ ಮಾವಿನ ಸುಗ್ಗಿ ಒಂದು ತಿಂಗಳು ತಡವಾಗಿ ಪ್ರಾರಂಭವಾಗಿದೆ.

ಶ್ರೀನಿವಾಸಪುರ ತಾಲೂಕಿನಲ್ಲಿ 12 ತಳಿಯ ಮಾವನ್ನು ಬೆಳೆಯಲಾಗುತ್ತಿದೆ. ರಾಜಗಿರಿ, ರಸಪುರಿ, ಮಲಗೋವಾ, ಬಾದಾಮಿ, ಬೇನಿಷಾ, ಮಲ್ಲಿಕಾ, ನೀಲಂ, ತೋತಾಪುರಿ, ಕುದೂಸ್‍, ಕಾಲಾಪಾಡ್‍, ಆಮ್ಲೆಟ್‍, ನಾಟಿ ತಳಿಗಳ ವಹಿವಾಟು ನಡೆಯುತ್ತಿದೆ. ಮಹಾರಾಷ್ಟ್ರ,ಗುಜರಾತ್‍, ರಾಜಸ್ತಾನ, ಮಧ್ಯಪ್ರದೇಶ, ನವದೆಹಲಿ, ಪಂಜಾಬ್‍, ಹರಿಯಾಣ ರಾಜ್ಯಗಳಿಗೆ ಈ ತಾಲ್ಲೂಕಿನ ಮಾವು ರವಾನೆಯಾಗುತ್ತದೆ.

ರಾಜಗೀರ ತಳಿ ಮಾವು ತಾಲೂಕಿನಲ್ಲಿ ಮಾರುಕಟ್ಟೆಗೆ ಮೊದಲು ಬರುತ್ತದೆ. ಹಂತ ಹಂತವಾಗಿ ಇತರ ತಳಿಯ ಮಾವಿನ ಕಾಯಿಗಳು ಬರುತ್ತವೆ. ಆದರೆ ರೈತರು ರಾಜಗೀರ ತಳಿಯ ಮಾವು ಮಾತ್ರವಲ್ಲದೆ, ಇನ್ನೂ ಪಕ್ವವಾಗದ ತೋತಾಪುರಿ, ಬಾದಾಮಿ, ಬೇನಿಷಾ ಮುಂತಾದ ತಳಿ ಮಾವನ್ನೂ ತಂದು ಮಂಡಿಗೆ ಹಾಕುತ್ತಿದ್ದಾರೆ. ತೋತಾಪುರಿ ಒಂದು ಟನ್‌ಗೆ ₹ 9 ಸಾವಿರದಿಂದ 14 ಸಾವಿರ ರೂ., ಬಾದಾಮಿ  16 ರಿಂದ 19 ಸಾವಿರ ರೂ., ರಾಜಗೀರ  9 ರಿಂದ 12 ಸಾವಿರ ರೂ.ಯಂತೆ ಮಾರಾಟವಾಗುತ್ತಿದೆ ಎಂದು ಟಿ.ಎಮ್.ಬಿ. ಮಂಡಿ ಮಾಲಕ  ಮೊಹ್ಮದ್ ಇರ್ಶಾದ್ ಹೇಳುತ್ತಾರೆ.

ಈ ಬಾರಿ ತಡವಾಗಿ ಹೂ ಬಂದ ಪರಿಣಾಮ, ಫಸಲು ಪಕ್ವಗೊಳ್ಳುವುದು ತಡವಾಗಿದೆ. ಆದರೂ ಕೆಲವು ಮಾವು ಬೆಳೆಗಾರರು ಹಣದ ಅಗತ್ಯ, ಕಳ್ಳರ ಕಾಟ, ಕಾವಲಿಗೆ ತೊಡಕು ಇತ್ಯಾದಿ ಕಾರಣಗಳಿಂದ ಮುಂಚಿತವಾಗಿ ಕಾಯಿ ಕೀಳುತ್ತಿದ್ದಾರೆ. ಮಾರುಕಟ್ಟೆಗೆ ಇನ್ನೂ ಹೊರಗಿನ ವ್ಯಾಪಾರಿಗಳು ಬಂದಿಲ್ಲ. ಹಾಗಾಗಿ ಕಾಯಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಮಾವು ಬೆಳೆಗಾರರು ವೈಜ್ಞಾನಿಕವಾಗಿ ಕಾಯಿ ಕೀಳುವುದಿಲ್ಲ. ಅದು ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕೆಲವು ರೈತರು ತೊಟ್ಟು ಸಹಿತ ಕಾಯಿ ಕಟಾವು ಮಾಡಿ, ಕ್ರೇಟ್‌ಗಳಿಗೆ ತುಂಬಿ ಮಂಡಿಗೆ ತರುತ್ತಿದ್ದಾರೆ. ಹಾಗೆ ಮಾಡುವುದರಿಂದ ಸರಕು ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ ಎಂಬ ನಂಬಿಕೆ ಅವರದ್ದು.‌

ಸಗಟು ಮಾರುಕಟ್ಟೆಯಲ್ಲಿ ಮಾವಿನ ಕಾಯಿ ಬೆಲೆ ಕುಸಿದಿದ್ದರೂ ಚಿಲ್ಲರೆ ಬೆಲೆ ಮಾತ್ರ ಗಗನಕ್ಕೇರಿದೆ. ಚಿಲ್ಲರೆ ವ್ಯಾಪಾರಿಗಳು ಕಡಿಮೆ ಬೆಲೆಗೆ ಕಾಯಿ ಖರೀದಿಸಿ ತಮ್ಮದೇ ಆದ ವಿಧಾನದಲ್ಲಿ ಹಣ್ಣು ಮಾಡಿ ಮಾರುತ್ತಿದ್ದಾರೆ. ಹಣ ಕೊಟ್ಟರೂ ಕಾಯಿ ರುಚಿಯಿಲ್ಲ ಎನ್ನುತ್ತಿದ್ದಾರೆ ಗ್ರಾಹಕರು.

ಮಾವಿನ ಕಾಯಿ ಮಂಡಿಗಳಲ್ಲಿ ಕೆಲಸ ಮಾಡಲು ನೆರೆಯ ಆಂಧ್ರಪ್ರದೇಶದಿಂದ ಕಾರ್ಮಿಕರು ಕುಟುಂಗಳ ಸಹಿತ ಬಂದಿದ್ದಾರೆ. ಆದರೆ ಕೆಲಸ ಮಾತ್ರ ಇಲ್ಲ. ಮಾವು ವಹಿವಾಟು ಪೂರ್ಣ ಪ್ರಮಾಣದಲ್ಲಿ ನಡೆಯಲು ಇನ್ನೂ ಒಂದೆರಡು ವಾರಗಳು ಕಳೆಯಬೇಕು. ಆಗಷ್ಟೇ ವಹಿವಾಟಿನ ಪೂರ್ಣ ಚಿತ್ರಣ ಕಂಡುಬರಲು ಸಾಧ್ಯ ಎನ್ನುವರು ವ್ಯಾಪಾರಿಗಳು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

IMG-20180527-WA0469

By suddi9

Leave a Reply

Your email address will not be published. Required fields are marked *