d615156b6c83d0ed6e4a0f85ce341a17_XL

ಮಂಗಳೂರ: ನಗರದ ಕುದ್ರೋಳಿಯ ಮನೆಯೊಂದಕ್ಕೆ ಗುರುವಾರ ರಾತ್ರಿ ನುಗ್ಗಿ ಮಹಿಳೆಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಪ್ಪಳದ ಫಿರ್ದೊಝ್‌ನಗರ ನಿವಾಸಿ ಸುಹೈಲ್(೪೦) ಎಂಬಾತನಿಗಾಗಿ ಬರ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಕುದ್ರೋಳಿ ಜಾಮಿಯಾ ಮಸೀದಿ ಬಳಿಯ ನಿವಾಸಿಯಾಗಿರುವ ವಿವಾಹಿತ ಮಹಿಳೆಯು ಚೂರಿ ಇರಿತದಿಂದ ಗಾಯಗೊಂಡಿದ್ದು, ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಗಾಯಗೊಂಡ ಮಹಿಳೆಯ ಗಂಡ ಮತ್ತು ಮಕ್ಕಳು ಗುರುವಾರ ರಾತ್ರಿ ೯:೪೫ರ ವೇಳೆಗೆ ಮಸೀದಿಗೆ ತೆರಳಿದ ಸಂದರ್ಭ ನೋಡಿದ ಆರೋಪಿಯು ಸದ್ರಿ ಮನೆಯ ಬಾಗಿಲು ಬಡಿದಿದ್ದ. ಆವಾಗ ಮಹಿಳೆಯು ಮಸೀದಿಯಿಂದ ಗಂಡ ಮತ್ತು ಮಕ್ಕಳು ಬಂದಿರಬೇಕು ಎಂದು ಭಾವಿಸಿದ್ದರು. ಅಲ್ಲದೆ ಮನೆಯೊಳಗಿದ್ದ ಮಗನೊಬ್ಬ ಬಾಗಿಲು ತೆರೆದಿದ್ದ. ಅಷ್ಟರಲ್ಲಿ ಒಳನುಗ್ಗಿದ ಆರೋಪಿ ಸುಹೈಲ್ ಏಕಾಏಕಿ ಮನೆಯ ಒಳಗೆ ಪ್ರವೇಶಿಸಿ ಮಹಿಳೆಗೆ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆಗೆ ಯತ್ನಿಸಿದ್ದ. ಅಲ್ಲದೆ ಅಡುಗೆ ಮನೆಗೆ ನುಗ್ಗಿ ಚೂರಿ ತಂದು ಇರಿಯಲು ಮುಂದಾದಾಗ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮಹಿಳೆಯ ಕೈಗಳಿಗೆ ಗಾಯವಾಗಿದೆ. ಅಪಾಯದ ಮುನ್ಸೂಚನೆ ಅರಿತ ಮಹಿಳೆ ಮತ್ತು ಆಕೆಯ ಮಗ ಬೊಬ್ಬೆ ಹಾಕಿದ ವೇಳೆ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತಕ್ಷಣ ಸ್ಥಳೀಯರು ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ಮುಂದುವರಿದಿದೆ.

By Suddi9

Leave a Reply

Your email address will not be published. Required fields are marked *