hqdefault

ಮಂಗಳೂರು: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರಿನ ೩ನೇ ವರ್ಷದ “ಪಟ್ಲ ಸಂಭ್ರಮ” ಕಾರ್ಯಕ್ರಮವು ಮೇ 27ರಂದು ಅಡ್ಯಾರ್‌ನಲ್ಲಿರುವ ಅಡ್ಯಾರ್ ಗಾರ್ಡನ್‌ನಲ್ಲಿ ಜರಗಲಿದೆ.

ಶೇಣಿ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಪಟ್ಲ ಸಂಭ್ರಮ ನಡೆಯಲಿದ್ದು,  ಬೆಳಗ್ಗೆ 8ರಿಂದ “ಚೌಕಿ ಪೂಜೆ ಅಬ್ಬರ ತಾಳ”, ಬೆಳಗ್ಗೆ 9ರಿಂದ “ಚೆಂಡೆ ಜುಗಲ್ ಬಂದಿ -ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ”, 9.45ರಿಂದ ಉದ್ಘಾಟನಾ ಸಮಾರಂಭ, 10ರಿಂದ ಮಧ್ಯಾಹ್ನ 2ರವರೆಗೆ ಟ್ರಸ್ಟಿನ ಸದಸ್ಯರು ಹಾಗೂ ಯಕ್ಷಭಿಮಾನಿಗಳಿಂದ ರಕ್ತ ದಾನ ಶಿಬಿರ, ಯಕ್ಷಗಾನ ಕಲಾವಿದರು ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸನೆ ಹಾಗೂ ಉಚಿತ ಔಷಧಿ ವಿತರಣೆ ಆಯೋಜಿಸಲಾಗಿದೆ.

ಬೆಳಗ್ಗೆ 11ರಿಂದ “ಯಕ್ಷಸಪ್ತಸ್ವರ ಗಾನವೈಭವ”, ಮಧ್ಯಾಹ್ನ 1ರಿಂದ “ಮಹಿಳಾ ಯಕ್ಷಗಾನ”, 2.3೦ರಿಂದ 4ರವರೆಗೆ “ತಾಳಮದ್ದಳೆ-ಅಗ್ರಪೂಜೆ”, ೪ರಿಂದ ಬಾಲಕಲಾವಿದೆಯಿಂದ “ಯಕ್ಷಗಾನ ನೃತ್ಯ”, 4.15ರಿಂದ 5.15ರವರೆಗೆ “ಯಕ್ಷ ಮಿತ್ರರು ದುಬೈ” ಮಕ್ಕಳ ತಂಡದಿಂದ “ಯಕ್ಷಗಾನ ಏಕದಶಿ ವೃತ ಮಹಾತ್ಮೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಳಿಕ ಸಂಜೆ 5.3೦ರಿಂದ ೭ರತನಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ಒಂದು ಲಕ್ಷ ರೂ.ನಗದಿನೊಂದಿಗೆ “ಪಟ್ಲ ಪ್ರಶಸ್ತಿ” ೨೦೧೮ ಪ್ರದಾನ ಮಾಡಲಾಗುವುದು, ವೃತ್ತಿ ಕಲಾವಿದರಾದ ಕುರಿಯ ಗಣಪತಿ ಶಾಸ್ತ್ರಿ, ಆರ್‍ಗೋಡು ಮೋಹನ್‌ದಾಸ್ ಶೆಣೈ, ಎಂ.ಕೆ ರಮೇಶ ಆಚಾರ್ಯ, ಆನಂದ ಶೆಟ್ಟಿ ಐರಬೈಲು, ಹವ್ಯಾಸಿ ಕಲಾವಿದರಿಂದ ಕುತ್ತೊಟ್ಟು ವಾಸು ಶೆಟ್ಟಿ ಮತ್ತು ಪಾರೆಕೋಡಿ ಗಣಪತಿ ಭಟ್ ಹಾಗೂ ಮಹಿಳಾ ಕಲಾವಿದೆಯರಾದ ಶೀಲಾ.ಕೆ ಶೆಟ್ಟಿ ಮತ್ತು ಮಹಾಲಕ್ಷ್ಮೀ ಡಿ.ರಾವ್ ಇವರಿಗೆ “ಯಕ್ಷಧ್ರುವ ಕಲಾ ಗೌರವ” ನೀಡಿ ಸನ್ಮಾನಿಸಲಾಗುವುದು ಹಾಗೂ ತೆಂಕು ತಿಟ್ಟಿನ ಭಾಗವತ ಕೀರ್ತಿಶೇಷ ಕುಬಣೂರು ಶ್ರೀಧರ ರಾವ್‌ರವರಿಗೆ “ಮರಣೋತ್ತರ ಪ್ರಶಸ್ತಿ” 25೦೦೦ ರೂ. ನಗದಿನೊಂದಿಗೆ ನೀಡಲಾಗುವುದು. ಅಲ್ಲದೆ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ಎಸೆಸೆಲ್ಸಿ, ದ್ವಿತೀಯ ಪರೀಕ್ಷೆಯಲ್ಲಿ ಶೇ.9೦ರಷ್ಟು ಮೇಲ್ಪಟ್ಟ ಗರಿಷ್ಠ ಅಂಕಗಳಿಸಿರುವ ವೃತ್ತಿಪರ ಕಲಾವಿದರ ಮಕ್ಕಳಿಗೆ ಬಂಗಾರದ ಪದಕ ನೀಡಿ ಗೌರವಿಸಲಾಗುವುದು.

ತೆಂಕು ಹಾಗೂ ಬಡಗಿನ ೧೨ ಸತ್ಪಾತ್ರ ಕಲಾವಿದರಿಗೆ ತಲಾ 5೦೦೦೦ ರೂ. ಗೌರವಧನ, ಗೃಹ ಯೋಜನೆಯಲ್ಲಿ ೧೫ ಮಂದಿ ಕಲಾವಿದರಿಗೆ ಗೃಹನಿರ್ಮಾಣಕ್ಕೆ ತಲಾ 25000 ರೂ. ಸಹಾಯಧನ ನೀಡಲಾಗುವುದು. ಡಾ. ಶಿಮಂತೂರು ನಾರಾಯಣ ಶೆಟ್ಟಿ ಹಾಗೂ ಗಣೇಶ್ ಕೊಲ ಕಾಡಿ ವಿರಚಿತ ಯಕ್ಷಗಾನ ಪ್ರಸಂಗಗಳ ಸಂಪುಟ ಪ್ರಕಾಶನ-ಕೃತಿ ಬಿಡುಗಡೆ ಕಾರ್ಯಕ್ರಮ ಇದೇ ವೇಳೆ ನಡೆಯಲಿದೆ.

ಇನ್ನೂ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್  ಸ್ಟಾರ್ ನಟ ದರ್ಶನ್, ಕಿರಿಕ್ ಪಾರ್ಟಿ ಖ್ಯಾತಿಯ ರಿಷಭ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *