Mangaluru-Harbor_1200x603xt

ಮಂಗಳೂರು: ಈ ಸಾಲಿನ ಮೀನುಗಾರಿಕಾ ಋತುವಿನ ಮುಕ್ತಾಯ ಸಮೀಪಿಸಿದೆ. ಜೂನ್ 1ರಿಂದ 61 ದಿನಗಳ ಕಾಲ ಮೀನುಗಾರಿಕಾ ರಜೆ ಆರಂಭವಾಗಲಿರುವ ಹಿನ್ನಲೆಯಲ್ಲಿ ಆಳ ಸಮುದ್ರದಿಂದ ಮೀನುಗಾರಿಕಾ ದೋಣಿಗಳು ಕಡಲ ತಡಿಯತ್ತ ಮರಳುತ್ತಿವೆ. ಫಿಶ್ ಕ್ಯಾಚ್ ಈ ಬಾರಿ ಉತ್ತಮವಾಗಿದ್ದರೂ ಮೀನುಗಾರರ ದೋಣಿಗಳ ಸಂಖ್ಯೆ ಏರಿಕೆಯಿಂದ ಮೀನುಗಾರರಿಗೆ ನಿರೀಕ್ಷಿತ ಪ್ರಮಾಣದ ಲಾಭ ದೊರಕಿಲ್ಲ. ಅತ್ತ ಲಾಭವೂ ಇಲ್ಲದೇ ಇತ್ತ ನಷ್ಟವೂ ಇಲ್ಲದೇ ಸಾಧಾರಣ ಮೀನುಗಾರಿಕಾ ಋತು ಅಂತ್ಯಗೊಂಡಿದೆ.

ಕರಾವಳಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲ ಮಕ್ಕಳಿಗೆ ಮೀನುಗಾರಿಕಾ ರಜೆ ಆರಂಭವಾಗುತ್ತದೆ. ಕಡಲಲ್ಲಿ ಮಳೆಗಾಲ ಮೀನುಗಳ ಸಂತಾನೋತ್ಪತ್ತಿ ಕಾಲವಾದ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ರಾಜ್ಯ ಸರಕಾರ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರುವುದು ವಾಡಿಕೆ.

ಜೂನ್‌ ತಿಂಗಳಲ್ಲಿ ಮಳೆ ಆರಂಭವಾದೊಡನೆ ಸಮುದ್ರ ಸಹ ರೌದ್ರಾವತಾರ ತಾಳುತ್ತದೆ. ಸಮುದ್ರದಲ್ಲಿ ಅಲೆಗಳ ಆರ್ಭಟವು ಹೆಚ್ಚಾಗಿರುತ್ತದೆ. ಈ ವೇಳೆ ಸಮುದ್ರದಲ್ಲಿ ಬಿರುಗಾಳಿ ಹೆಚ್ಚು ಬೀಸುತ್ತದೆ. ಈ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳಿದರೆ ಅಪಾಯವು ಸಹ ಕಟ್ಟಿಟ್ಟ ಬುತ್ತಿ. ಸಮುದ್ರದ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳುವ ಬೋಟ್‌‌ಗಳು ಅಪಾಯಕ್ಕೆ ಸಿಲುಕಿಕೊಂಡು ಪ್ರಾಣಾಪಾಯವಾಗುವ ಸಾಧ್ಯತೆಯೂ ಹೆಚ್ಚು. ಈ ಕಾರಣಕ್ಕಾಗಿ ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಯನ್ನು ಸರ್ಕಾರ ನಿಷೇಧಿಸುತ್ತದೆ.ಮೀನುಗಾರಿಕಾ ರಜೆ ಆರಂಭದ ಹಿನ್ನೆಲೆಯಲ್ಲಿ ಆಳ ಸಮುದ್ರಕ್ಕೆ ತೆರಳಿದ ಮೀನುಗಾರಿಕಾ ದೋಣಿಗಳು ಕಡಲ ತಡಿಯತ್ತ ಹೊರಟು ನಿಂತಿದ್ದು, ಹಲವು ದೋಣಿಗಳು ಈಗಾಗಲೇ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿವೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1300 ಕ್ಕೂ ಹೆಚ್ಚು ಆಳ ಸಮುದ್ರ ಮೀನುಗಾರಿಕಾ ದೋಣಿಗಳಿದ್ದವು. ಆದರೆ ಈ ಸಾಲಿನಲ್ಲಿ ಇದರ ಸಂಖ್ಯೆ ಹೆಚ್ಚಿದೆ. ಈ ಹಿನ್ನಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮೀನುಗಾರರಿಗೆ ಲಾಭ ದೊರಕಿಲ್ಲ. ಇದ್ದುದರಲ್ಲಿ ಈ ಬಾರಿ ಬಂಗುಡೆ, ಅಂಜಲ್, ಕೊಡ್ಡಾಯಿ ಮೀನುಗಾರರಿಗೆ ಲಾಭ ತಂದು ಕೊಟ್ಟಿವೆ. ಜುಲೈ 31 ಕ್ಕೆ ಮೀನುಗಾರರಿಗೆ ರಜೆ ಮುಗಿಯಲಿದ್ದು ಮತ್ತೆ ಕಡಲ ಮಕ್ಕಳು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯಲಿದ್ದಾರೆ.

By suddi9

Leave a Reply

Your email address will not be published. Required fields are marked *