ಕುಲಶೇಖರ: ಇಂದು ನನಗೆ ಅತ್ಯಂತ ಖುಷಿಯ ದಿನ. ತುಳುನಾಡಿನ ಮೂಲನಿವಾಸಿಗಳು, ಅತಿ ಎನ್ನುವಷ್ಟು ಸಾಮಾಜಿಕ ಶೋಷಣೆಗೆ ಒಳಪಟ್ಟ, ದಲಿತರಲ್ಲೇ ತೀರಾ ಅಸ್ಪೃಷ್ಯತೆಗೆ ಗುರಿಯಾದ ಎಂಟು ಕೊರಗ ಕುಟುಂಬಗಳಿಗೆ ಹೋರಾಟದ ಮೂಲಕ ನಿರ್ಮಿಸಿದ ಮನೆಗಳ ಒಕ್ಕಲು, ಹಸ್ತಾಂತರ ಕಾರ್ಯಕ್ರಮ.
ಹತ್ತು ವರ್ಷಗಳ ಹಿಂದೆ ರಾಷ್ಡ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಯಾವುದೇ ಪರಿಹಾರಗಳಿಲ್ಲದೆ ಬೀದಿಗೆ ತಳ್ಳಲ್ಪಟ್ಟ ಎಂಟು ಕೊರಗ ಕುಟುಂಬಗಳ ಪುನರ್ವಸತಿಗೆ ಒತ್ತಾಯಿಸಿ ಮಂಗಳೂರಿನ ಸಿಪಿಐಎಂ ಸಂಗಾತಿಗಳು ತೀವ್ರ ಹೋರಾಟ ಸಂಘಟಿಸಿದ್ದರು. ಸತತ ಹತ್ತು ವರ್ಷಗಳ ಪರಿಶ್ರಮ, ದಣಿವರಿಯದ ಹೋರಣಟದಿಂದಾಗಿ ಇಂದು ಎಂಟು ಕುಟುಂಬಗಳು ಕುಲಶೇಖರದ ಬಳಿ ನಿರ್ಮಿಸಲಾದ ಹೊಸ ಮನೆ ಪ್ರವೇಶಿಸಿದವು.
ಸರಕಾರ ಕೊಟ್ಟ ತುಂಡು ಭೂಮಿ, ಒಂದಿಷ್ಟು ಪರಿಹಾರ ದಿನಕ್ಕೆ ಎರಡಷ್ಟು ದೇಣಿಗೆಯನ್ನು ಸಮಾನ ಮನಸ್ಕರಿಂದ ಸಂಗ್ರಹಿಸಿ, ಶ್ರಮದಾನಗಳನ್ನು ಮಾಡಿ ಪುಟ್ಟದಾದರು ಸುಂದರವಾದ, ಕನಿಷ್ಠ ಹತ್ತನ್ನೆರಡು ಲಕ್ಷ ತಲಾ ಖರ್ಚಿನ ಸುಂದರ ಮನೆಯನ್ನು ನಿರ್ಮಿಸಲು ಸಾಧ್ಯವಾದದ್ದು ಮಂಗಳೂರಿನ ಕಮ್ಯುನಿಸ್ಟ್ ಚಳವಳಿಯ ಬದ್ಧತೆಗೆ ಸಾಕ್ಷಿಯಂತಿದೆ. ಇಂತಹ ಅಪಾರ ಶ್ರಮದ ಕೆಲಸವನ್ನು ಸತತವಾಗಿ ಬೆನ್ನತ್ತಿದ, ಯಶಸ್ವಿಯಾದ ಕಾಮ್ರೇಡ್ ಕೃಷ್ಣಪ್ಪ ಕೊಂಚಾಡಿ, ಯೋಗೇಶ್ ಜಪ್ಪಿನಮೊಗರು ಮತ್ತಿತರ ಸಂಗಾತಿಗಳ ಶ್ರಮಕ್ಕೆ ಸಲಾಂ.
ಅತ್ಯಂತ ದಾರುಣ ಬದುಕು ಸಾಗಿಸುವ, ಸರಾಸರಿ ನಲವತ್ತು ವರ್ಷಗಳ ಆಯಸ್ಸು ಹೊಂದಿರುವ ಕೊರಗರ ಉದ್ಧಾರದ ಬಗ್ಗೆ ಬೊಗಳೆ ಬಿಡುವ, ಬಣ್ಣದ ಪ್ಯಾಕೇಜ್ ಗಳನ್ನು ಘೋಷಿಸಿ ಬೆನ್ನುತಟ್ಟಿಸಿಕೊಳ್ಳುವ ಸರಕಾರ, ಜನಪ್ರತಿನಿಧಿಗಳು ಮಂಗಳೂರಿನ ಕೊರಗ ಕುಟುಂಬಗಳನ್ನು ನಿರ್ಧಯವಾಗಿ ಬೀದಿಗೆ ತಳ್ಳಿದ್ದು, ಸತತ ಹತ್ತು ವರ್ಷಗಳ ಹೋರಾಟದ ನಂತರ ಅಂಗೈ ಅಗಲದ ನೆಲ, ಚಿಕ್ಕಾಸು ಪರಿಹಾರ ನೀಡಿ ಕೈತೊಳೆದದ್ದು ನಮ್ಮ ಸಮಾಜದ ಸಂವೇದನಾ ರಹಿತ ಸ್ಥಿತಿಗೆ ಉದಾಹರಣೆ.
ಒಂದು ಅಸೆಂಬ್ಲಿ ಕ್ಷೇತ್ರದ ಚುನಾವಣೆಗೆ ಹತ್ತಿಪ್ಪತ್ತು ಕೋಟಿ ಖರ್ಚು ಮಾಡುವ, ಪಕ್ಷಾಂತರಗೊಳ್ಳುವ ಶಾಸಕರ ತಲೆಗೆ ನೂರು ಕೋಟಿ ದರ ನಿಗದಿ ಮಾಡುವ ನಾಡಿನಲ್ಲಿ ಸಣ್ಣ ಸೂರಿಗಾಗಿ ಹತಭಾಗ್ಯರು ನಡೆಸುವ ಹೋರಾಟಗಳು ಸಿನೆಮಾದಲ್ಲಿ ಎಡಿಟ್ ಮಾಡಿ ಎಸೆದ ಭಾಗದಂತೆ ಕಾಣುತ್ತದೆ. ಇಂತಹವರ ಪರ ನಿಂತು ಬಡಿದಾಡುವ, ಪರಿಹಾರ ಕೊಡಿಸುವ ಕಮ್ಯುನಿಸ್ಟರು ಇಂತಹ ಸಿನೆಮಾಗಳ ಕನಿಷ್ಠ ಟ್ರಾಜೆಡಿ ಸೀನ್ ಗಳು ಆಗದೆ ಹಾಸ್ಯ ಪಾತ್ರದಂತೆ ಕಾಣುತ್ತಿರುವುದು ಬದಲಾದ ಕಾಲಮಾನದ ಸಹಜ ನಡವಳಿಕೆಯಂತಾಗಿದೆ.
-ಮುನೀರ್ ಕಾಟಿಪಳ್ಳ





