muneer-1

ಅಡ್ಡೂರು: ಓರ್ವ ಜನನಾಯಕ ಎಂದೆನಿಸಿಕೊಂಡವನು ತನ್ನ ಪ್ರಜೆಗಳಿಗೆ ನಿಷ್ಠೆಯಾಗಿರಬೇಕು. ಬಡವರ ನೋವನ್ನು ಅನುಭವಿಸುವ ತ್ಯಾಗಿಯಾಗಿದ್ದವರು ಮಾತ್ರ ರಾಜಕಾರಣಕ್ಕಿಳಿಯಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ.

ಅಡ್ಡೂರಿನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ಜನಪ್ರತಿನಿಧಿಗಳಿಗೆ ಜನಸಮುದಾಯದ ಕಷ್ಟಕಾರ್ಪಣ್ಯಗಳು ಬೇಡವಾಗಿದ್ದು, ಕೇವಲ ಧರ್ಮಗಳ ಆಧಾರದಲ್ಲಿ ಮತಯಾಚಿಸುತ್ತಿದ್ದಾರೆ. ಈ ಬಾರಿಯ ಚುನಾವಣೆ ಹಿಂದೂ-ಮುಸ್ಲಿಂ ಧರ್ಮಗಳ ಮಧ್ಯೆ ನಡೆಯುವ ಸಂಘರ್ಷ ಅಲ್ಲ. ಬದಲಾಗಿ 90% ಬಡವರ ಹಾಗೂ 10% ಇರುವ ಶ್ರೀಮಂತರ ನಡುವಿನ ಸಂಘರ್ಷ ಆಗಿದೆ ಎಂದು ಹೇಳಿದರು.

ಬಿಜೆಪಿಯ ಕೋಮುವಾದವನ್ನು ಸೋಲಿಸಲು ಕಮ್ಯುನಿಸ್ಟ್ ಸೇರಿದಂತೆ ಇತರ ಪಕ್ಷಗಳು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸದಂತೆ ಒತ್ತಡ ಏರಲಾಗಿದೆ. ಒಂದು ವೇಳೆ ಕಾಂಗ್ರೆಸ್ ಗೆ ಸೀಟ್ ಸಿಗದಿದ್ದ ವೇಳೆ ಅದು ಬಿಜೆಪಿಯಾಗಿ ಪರಿವರ್ತನೆಯಾಗುತ್ತದೆ. ಹಾಗಾದರೆ ಇದೇನಾ ನಿಮ್ಮ ಸಿದ್ಧಾಂತ ಎಂದು ಕಿಡಿಕಾರಿದರು.

ಮುಸ್ಲಿಮ್ ಮೌಲವಿ ಗಫೂರ್ ರ ನ್ನು ಹತ್ಯೆಗೈದ ಕೊಲೆಗಡುಕರನ್ನು ಪಕ್ಷಕ್ಕೆ ಸೇರ್ಪಡಿಸಿದ ಮೊಯಿದ್ದೀನ್ ಬಾವಾ ಅವರ ನಡೆಯ ವಿರುದ್ಧ ಹರಿಹಾಯ್ದ ಅವರು, ಅಮಾಯಕ ಕಬೀರ್ ಮೇಲೆ ಎನ್ ಕೌಂಟರ್ ನಡೆಸಿದ ಎಎನ್‍ಎಫ್ ಸಿಬ್ಬಂದಿಯ ಅಮಾನತು ವಾಪಸ್ ಪಡೆದು ಪ್ರಕರಣವನ್ನು ಮುಚ್ಚುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಮೊಯಿದ್ದೀನ್ ಬಾವಾ ಅವರು ಚಕಾರ ಎತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಈ ಭಾಗದ ಯುವಕರಿಗೆ ಎಂಆರ್‍ ಪಿಎಲ್ ಕಂಪೆನಿಗಳಲ್ಲಿ ಉದ್ಯೋಗ ಕಲ್ಪಿಸುವ ಬದ್ಧತೆ ಇರದ ಮೊಯಿದ್ದೀನ್ ಬಾವಾ ಅವರು ಸೌದಿ ಅರೇಬಿಯಾದಲ್ಲಿ ಸಭೆ ನಡೆಸಿ ತನಗೆ ವೋಟು ಹಾಕುವಂತೆ ಯುವಕರಲ್ಲಿ ಬಹಿರಂಗವಾಗಿ ವಿನಂತಿಸುತ್ತಿದ್ದಾರೆ. ಇವರಿಗೆ ವೋಟಿನ ಚಿಂತೆ ನಮಗೆ ಯುವಕರ ಬದುಕಿನ ಚಿಂತೆ ಎಂದವರು, ಚರಂಡಿಗೆ ಬಿದ್ದಾದರು ಗೆದ್ದು ಶಾಸಕನಾಗಲು ಪಣತೊಟ್ಟಿರುವ ಬಾವಾರವರು ಯಾರನ್ನು ಉದ್ಧಾರ ಮಾಡಲು ಮುಂದಾಗಿದ್ದಾರೆ ಎಂದು ಕಟುವಾಗಿ ನುಡಿದರು.

ದೇಶದಲ್ಲಿ ಒಂದು ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ ನರೇಂದ್ರ ಮೋದಿಯವರು ಇಂದು ಯುವಕರಿಗೆ ಹತಾಶೆ ಮೂಡಿಸಿ ವಂಚಿಸಿದ್ದಲ್ಲದೆ, ನೋಟ್ ಬ್ಯಾನ್ ಮೂಲಕ ಬಡವರನ್ನು ಕೊಂದಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ಪಕ್ಷಗಳ ಅಧಃಪತನದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತಗೊಂಡಿದ್ದು, ಇದರಿಂದ ಸರಕಾರಿ ಶಿಕ್ಷಣ ಸಂಸ್ಥೆ, ಸರಕಾರಿ ಆಸ್ಪತ್ರೆಗಳು ಸೇರಿ ಹಲವಾರು ಮೂಲಭೂತ ಸೌಕರ್ಯಗಳು ನಿರ್ಮಾಣವಾಗಿಲ್ಲ. ಆದ್ದರಿಂದ ತೃತೀಯ ಶಕ್ತಿಯಾಗಿರುವ ಕಮ್ಯುನಿಸ್ಟ್ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ತನ್ನನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.

ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕಿ.ಇಮ್ತಿಯಾಝ್ ಮಾತನಾಡಿ, ಈ ಕ್ಷೇತ್ರದಲ್ಲಿ ಮುನೀರ್ ಕಾಟಿಪಳ್ಳ ಸ್ಪರ್ಧಿಸಿದರೆ ಕಾಂಗ್ರೆಸ್-ಬಿಜೆಪಿಗೆ ಸೋಲಾಗುವ ಭೀತಿ ಇದ್ದರೆ ಆ ಪಕ್ಷದ ಅಭ್ಯರ್ಥಿಗಳು ಇಂದೇ ಕಣದಿಂದ ಹಿಂದೆ ಸರಿಯಲಿ ಎಂದು ಸವಾಲೆಸೆದರು.

ಕೋಮುವಾದ ವಿರುದ್ಧ ಹೋರಾಡಲು ಇಚ್ಛಾಶಕ್ತಿ ಇಲ್ಲದ ಮೊಯಿದ್ದೀನ್ ಬಾವಾ ಅವರು ಇತ್ತೀಚೆಗೆ ಸಾರಮರಸ್ಯ ನಡಿಗೆ ಆಯೋಜಿಸಿ ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಎನ್ .ಇ.ಮೊಹಮ್ಮದ್, ಆನಂದ್ ಬಂಗೇರಾ, ಗಂಗಯ್ಯ ಅಮೀನ್, ಜಿ.ಎ.ಮೊಹಮ್ಮದ್, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಚರಣ್ ಶೆಟ್ಟಿ, ಅಬ್ದುಲ್ ರಹಿಮಾನ್ ಗೋಳಿಪಡ್ಪು, ಹನೀಫ್ ಉಪಸ್ಥಿತರಿದ್ದರು.

ಮನೋಜ್ ವಾಮಂಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

muneer-2

muneer-4

 

 

 

 

 

 

 

 

 

 

 

 

 

 

By suddi9

Leave a Reply

Your email address will not be published. Required fields are marked *