ಮಂಗಳೂರು: ಕರಾವಳಿಯಲ್ಲಿ ಇಂದು ಸಂಜೆ ಹೈವೋಲ್ಟೇಜ್ ಚುನಾವಣಾ ಪ್ರಚಾರ ನಡೆಯಲಿದೆ. ಕರಾವಳಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ.
ಮಂಗಳೂರಿನ ನೆಹರು ಮೈದಾನದಲ್ಲಿ ಸಂಜೆ 6 ಗಂಟೆಗೆ ಮೋದಿಯವರ ಸಾರ್ವಜನಿಕ ರ್ಯಾಲಿ ನಡೆಯಲಿದೆ. ಇದಕ್ಕಾಗಿ ಬಿಜೆಪಿ ವತಿಯಿಂದ ಭಾರೀ ಸಿದ್ಧತೆ ನಡೆದಿದೆ. ಜೊತೆಗೆ, ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಕಳೆದ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದ್ದರಿಂದ ಕಳಕೊಂಡ ಸ್ಥಾನಗಳನ್ನು ಮತ್ತೆ ಗಳಿಸಬೇಕೆಂಬ ನೆಲೆಯಲ್ಲಿ ಬಿಜೆಪಿ ಶತ ಪ್ರಯತ್ನದಲ್ಲಿದೆ. ಹೀಗಾಗಿ ಚುನಾವಣೆಗೆ ಒಂದು ವಾರ ಇರುವಾಗ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಮೋದಿ ರ್ಯಾಲಿಗಾಗಿ ನೆಹರು ಮೈದಾನದಲ್ಲಿ 50 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕು ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಸಂಜೆ 5.30ಕ್ಕೆ ಶಿವಮೊಗ್ಗದಿಂದ ಮಂಗಳೂರಿಗೆ ರ್ಯಾಲಿ ಬಳಿಕ ವಿಶೇಷ ವಿಮಾನ ಮೂಲಕ ನೇರವಾಗಿ ದೆಹಲಿಗೆ ತೆರಳಲಿದ್ದಾರೆ.

