ಉಡುಪಿ: ಪ್ರಧಾನಿ ಮೋದಿ ಚುನಾವಣೆ ಪ್ರಚಾರಕ್ಕಾಗಿ ಉಡುಪಿಗೆ ಬಂದಿದ್ದರೂ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡದಿರುವುದರಿಂದ ಮನಸ್ಸಿಗೆ ನೋವಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಮೋದಿಯವರ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕೃಷ್ಣ ಮಠಕ್ಕೆ ಭೇಟಿ ನೀಡುವ ಕುರಿತು ಇಲ್ಲದಿದ್ದರೂ ಕೊನೆಯ ಕ್ಷಣದಲ್ಲಿ ಮಠಕ್ಕೆ ಮೋದಿಯವರು ಭೇಟಿ ನೀಡಬಹುದೆಂಬ ನಿರೀಕ್ಷೆಯಿತ್ತು. ಅವರು ಭೇಟಿ ನೀಡದಿರುವುದು ಬೇಸರ ತಂದಿದೆ ಎಂದರು.
ಪ್ರಧಾನಿ ಚುನಾವಣಾ ಸಮಯದಲ್ಲಿ ಮಠಕ್ಕೆ ಭೇಟಿ ಕೊಡುವುದಿಲ್ಲ ಎಂದು ತಿಳಿದಿತ್ತು. ಆದರೂ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಬಹುದೆಂದು ಕೊಂಡು ಮಠದ ಸಿಬ್ಬಂದಿಗಳು ಮಠದಲ್ಲಿ ಸರ್ವ ತಯಾರಿ ನಡೆಸಿದ್ದರು. ಉಡುಪಿಯ ಪಾದೂರಿನಲ್ಲಿರುವ ಕಚ್ಚಾತೈಲ ಸಂಗ್ರಹಣಾ ಕೇಂದ್ದದ ಉಧ್ಘಾಟನೆಗೆ ಬರುವ ಸಂದರ್ಭ ಮತ್ತೊಮ್ಮೆ ಕೃಷ್ಣ ಮಠಕ್ಕೆ ಬರುವಂತೆ ಅಹ್ವಾನಿಸಲಾಗುವುದು ಎಂದರು.

