ಗುರುಪುರ: ಇಲ್ಲಿನ ಶ್ರೀ ಕ್ಷೇತ್ರ ಶ್ರೀ ವಜ್ರದೇಹಿ ಮಠದ ಶ್ರೀ ಗುರು ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ರಾಜಶೇಖರಾನಂದ ಸ್ವಾಮಿ ಸಾನಿಧ್ಯದೊಂದಿಗೆ ಬ್ರಹ್ಮಶ್ರೀ ಅರುಣ್ ಭಟ್ ನೇತೃತ್ವದಲ್ಲಿ ಇತ್ತೀಚೆಗೆ ಶ್ರೀ ನರಸಿಂಹ ಜಯಂತಿ ಮಹೋತ್ಸವ ಜರಗಿತು.
ಈ ಸಂದರ್ಭದಲ್ಲಿ, ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ನೂತನ `ಆಳು ಪಲ್ಲಕಿ’ ಸಮರ್ಪಿಸಲಾಯಿತು. ಬಳಿಕ, ಸಂಜೆ 6ರಿಂದ ಮಹಾರಂಗಪೂಜೆ, ಶ್ರೀ ದೇವರ ಬಲಿ ಉತ್ಸವ, ಆಳು ಪಲ್ಲಕಿ ಉತ್ಸವ, ಕಟ್ಟೆಪೂಜೆ, ದರ್ಶನ ಬಲಿ, ವಸಂತ ಮಂಟಪ ಪೂಜೆ ನಡೆಯಿತು.
ರಾತ್ರಿ 10 ಗಂಟೆಗೆ ಗುರುದಯ ತಂಡದ `ರಂಗ್‍ದ ಕಲಾವಿದೆರ್’ ಗುರುಪುರ ಇವರಿಂದ ಪ್ರಶಾಂತ್ ಗುರುಪುರ ಕತೆ, ಸಂಭಾಷಣೆಯ ಹೊಸ ತುಳು ನಾಟಕ `ನಂಬೆರಲತ್ತ್ ಬುಡ್ರೆಲತ್ತ್..?’ ಪ್ರದರ್ಶನಗೊಂಡಿತು. ಭಯಾನಕ ಮತ್ತು ಹಾಸ್ಯಗರ್ಭಿತ ವಿನೂತನ ಚಿತ್ರಕತೆ ಒಳಗೊಂಡ ಸಾಮಾಜಿಕ ನಾಟಕ ಇದಾಗಿದ್ದು, ಮಠದ ಆವರಣದಲ್ಲಿ ನಾಟಕದ ಪ್ರಥಮ ಪ್ರಯೋಗ ನಡೆಯಿತು.
ಲ. ಕಿಶೋರ್ ಡಿ. ಶೆಟ್ಟಿ ಹಾಗೂ ನವೀನ್ ಶೆಟ್ಟಿ ಅಳಕೆ ಮಾರ್ಗದರ್ಶನ, ನಟಿ ಶೋಭಾ ಶೆಟ್ಟಿ ಶಕ್ತಿನಗರ ಹಾಗೂ ದಿನೇಶ್ ಅತ್ತಾವರ ಸಲಹೆಯ ಈ ನಾಟಕಕ್ಕೆ ಪಚ್ಚು(ಪ್ರಶಾಂತ್) ಕೈಕಂಬ ನಿರ್ದೇಶನ ನೀಡಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಟಕಕ್ಕೆ ರಿತೇಶ್ ನಂದಳಿಕೆ ಸಂಗೀತ ನೀಡಿದ್ದಾರೆ. ಶ್ರೀಕಾಂತ್ ಗುರುಪುರ ವಿಶಿಷ್ಟ ದಾಟಿಯ ಹಾಡು ಬರೆದಿದ್ದಾರೆ.
ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡಿದರು. “ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಬೇಕೆಂಬ, ಹೊಸ ಹೊಸ ಕಲಾವಿದರ ಮೂಡಿ ಬರಬೇಕೆಂಬ ಉದ್ದೇಶ ಈ ನಾಟಕ ತಂಡ ಮಠದ ಹೊಸ್ತಿಲಲ್ಲಿ ರೂಪುಗೊಂಡಿದೆ. ತಂಡದ ಪ್ರತಿಯೊಂದು ನಾಟಕ ಉತ್ತಮವಾಗಿ ಮೂಡಿಬರಬೇಕೆಂಬ ಉದ್ದೇಶವಿಟ್ಟುಕೊಂಡಿರುವ ಕಲಾವಿದರ ದಿನರಾತ್ರಿಯ ಸಾಧನೆ ಪ್ರಸಂಶನೀಯ. ಈ ತಂಡ ರಂಗಕ್ಕೆ ಇನ್ನಷ್ಟು ಯಶಸ್ವಿ ಕಲಾ ಕಾಣಿಕೆ ನೀಡುವಂತಾಗಲಿ” ಎಂದು ಶ್ರೀ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡಿದರು.


